ADVERTISEMENT

ಉಗ್ರರಿಗೆ ಜೈಲು ಇಲ್ಲವೇ ನರಕ: ಸಚಿವ ನಿತ್ಯಾನಂದ ರಾಯ್‌

ಜಮ್ಮು–ಕಾಶ್ಮೀರದಲ್ಲಿನ ದಾಳಿಗಳ ಕುರಿತು ರಾಜ್ಯಸಭೆಯಲ್ಲಿ ಸಚಿವ ನಿತ್ಯಾನಂದ ರಾಯ್‌ ಉತ್ತರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 12:19 IST
Last Updated 24 ಜುಲೈ 2024, 12:19 IST
ನಿತ್ಯಾನಂದ ರಾಯ್
ನಿತ್ಯಾನಂದ ರಾಯ್   

ನವದೆಹಲಿ: ‘ಜಮ್ಮು–ಕಾಶ್ಮೀರದಲ್ಲಿನ ಉಗ್ರರ ಉಪಟಳವನ್ನು ಮಟ್ಟ ಹಾಕಲಾಗುವುದು. ಉಗ್ರರನ್ನು ಜೈಲಿಗೆ ಅಟ್ಟಲಾಗುವುದು ಇಲ್ಲವೇ ನರಕಕ್ಕೆ ಕಳುಹಿಸಲಾಗುವುದು’ ಎಂದು ಕೇಂಧ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್‌ ಅವರು ರಾಜ್ಯಸಭೆಯಲ್ಲಿ ಬುಧವಾರ ಹೇಳಿದರು.

ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭಯೋತ್ಪಾದನೆಗೆ ಸಂಬಂಧಿಸಿ ಶೂನ್ಯ ಸಹಿಷ್ಣುತೆ ನೀತಿ ಹೊಂದಿದೆ’ ಎಂದರು.

‘ಇತ್ತೀಚೆಗೆ ಜಮ್ಮು–ಕಾಶ್ಮೀರದಲ್ಲಿ ಉಗ್ರರು ಮತ್ತೆ ಸಕ್ರಿಯರಾಗಿದ್ದಾರೆ. ಆದರೆ, ಅವರ ಉದ್ದೇಶ ಈಡೇರುವುದಿಲ್ಲ’ ಎಂದು ರಾಯ್‌ ಹೇಳಿದರು.

ADVERTISEMENT

ಸಂವಿಧಾನದ 370ನೇ ವಿಧಿ ಅಡಿ ಜಮ್ಮು–ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು  ಕೇಂದ್ರ ಸರ್ಕಾರ 2019ರಲ್ಲಿ ಹಿಂತೆಗೆದುಕೊಂಡ ನಂತರ ಭದ್ರತಾ ಪಡೆಗಳು 900ರಷ್ಟು ಉಗ್ರರನ್ನು ಹೊಡೆದುರುಳಿಸಿವೆ ಎಂದೂ ಹೇಳಿದರು.

‘2004ರಿಂದ 2014ರ ವರೆಗಿನ ಯುಪಿಎ ಆಡಳಿತದ ಅವಧಿಯಲ್ಲಿ ಜಮ್ಮು–ಕಾಶ್ಮೀರದಲ್ಲಿ 7,217 ಉಗ್ರರ ದಾಳಿ ಘಟನೆಗಳು ಸಂಭವಿಸಿದ್ದವು. 2014ರಿಂದ ಈ ವರ್ಷದ ಜುಲೈ 21ರ ವರೆಗಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಇಂತಹ ಘಟನೆಗಳ ಸಂಖ್ಯೆ 2,259ಕ್ಕೆ ಇಳಿಕೆಯಾಗಿದೆ. ಇಂತಹ ಘಟನೆಗಳು ಸಂಭವಿಸಬಾರದಿತ್ತು. ಆದರೆ, ವಿರೋಧ ಪಕ್ಷಗಳು ಈ ವಿಷಯವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.