ಪುಣೆ:ಚಂದ್ರನಲ್ಲಿಗೆ ಉಪಗ್ರಹ ಕಳುಹಿಸುವ ಅಮೆರಿಕದ ಯೋಜನೆಯು 39ನೇ ಪ್ರಯತ್ನದಲ್ಲಿ ಯಶಸ್ಸು ಕಾಣಲು ‘ಏಕಾದಶಿ’ಯಂದು ಉಡಾವಣೆ ಮಾಡಿದ್ದೇ ಕಾರಣ ಎಂದು ಆರ್‌ಎಸ್‌ಎಸ್ ನಾಯಕ ಸಾಂಭಾಜಿ ಭಿಡೆ ಹೇಳಿದ್ದಾರೆ.
ಇಸ್ರೊದ ಮಹತ್ವಾಕಾಂಕ್ಷೆಯ ‘ಚಂದ್ರಯಾನ–2’ ಯೋಜನೆಯ ‘ವಿಕ್ರಂ’ ಲ್ಯಾಂಡರ್ ಚಂದ್ರನಲ್ಲಿ ಇಳಿಯುತ್ತಿದ್ದಂತೆ ಸಂಪರ್ಕ ಕಡಿದುಕೊಂಡ ಬೆನ್ನಲ್ಲೇ ಸೋಮವಾರ ಭಿಡೆ ಈ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿರುವ ‘ಶಿವ ಪ್ರತಿಷ್ಠಾನ ಹಿಂದುಸ್ತಾನ್’ನ ಮುಖ್ಯಸ್ಥರಾಗಿರುವ ಭಿಡೆ, 2018ರ ಜನವರಿ 1ರಂದು ಘಟಿಸಿದ್ದ ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ. ಆದಾಗ್ಯೂ ಅವರನ್ನು ಈವರೆಗೆ ಬಂಧಿಸಲಾಗಿಲ್ಲ.
ಸಾಂಭಾಜಿ ಭಿಡೆ ಹೇಳಿದ್ದೇನು?:ಸೋಲಾಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಭಿಡೆ, ‘ಚಂದ್ರನಲ್ಲಿಗೆ ಉಗ್ರಹ ಕಳುಹಿಸಲು ಅಮೆರಿಕ 38 ಬಾರಿ ಪ್ರಯತ್ನಿಸಿತ್ತು. ಆದರೆ ವಿಫಲವಾಗಿತ್ತು’ ಎಂದು ಹೇಳಿದ್ದಾರೆ.
ಮುಂದುವರಿದು, ‘ಸತತ ವೈಫಲ್ಯದಿಂದಾಗಿ ಅಮೆರಿಕದ ವಿಜ್ಞಾನಿಯೊಬ್ಬರು, ಹಿಂದೂ ಕ್ಯಾಲೆಂಡರ್‌ನ ದಿನಾಂಕ ಲೆಕ್ಕಾಚಾರ ವಿಧಾನವನ್ನು ಗಣನೆಗೆ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಇದನ್ನು ಅನುಷ್ಠಾನಗೊಳಿಸಿದ ಪರಿಣಾಮವಾಗಿ 39ನೇ ಪ್ರಯತ್ನದಲ್ಲಿ ಅವರು ಯಶಸ್ವಿಯಾದರು. ‘ಏಕಾದಶಿ’ ದಿನ ಅವರು ಉಪಗ್ರಹ ಉಡಾವಣೆ ಮಾಡಿದ್ದೇ ಯಶಸ್ಸಿಗೆ ಕಾರಣ’ ಎಂದು ಭಿಡೆ ಹೇಳಿದ್ದಾರೆ.
ಹಿಂದೂ ಕ್ಯಾಲೆಂಡರ್ (ಪಂಚಾಂಗ) ಪ್ರಕಾರ, ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷದಲ್ಲಿ ಬರುವ 11ನೇ ದಿನವನ್ನು ‘ಏಕಾದಶಿ’ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಮತ್ತು ಜೈನ ಧರ್ಮದಲ್ಲಿ ‘ಏಕಾದಶಿ’ಯನ್ನು ಆಧ್ಯಾತ್ಮಿಕ ದಿನವೆಂದು ಪರಿಗಣಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ
ಭಿಡೆ ಹೇಳಿಕೆಗೆ ಟ್ವಿಟರ್‌ನಲ್ಲಿ ಅನೇಕ ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘ಈ ಗೂಂಡಾ ಯಾಕೆ ಜೈಲುಸೇರಿಲ್ಲ?ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಈತನ ವಿರುದ್ಧ ದಾಖಲಾಗಿರುವ ಪ್ರಕರಣ ಏನಾಗಿದೆ?
ಪೊಲೀಸ್ ರಾಜ್ಯದಲ್ಲಿ ಹೀಗಾಗುತ್ತದೆ. ಸುಧಾ ಭಾರದ್ವಾಜ್ (ಆದಿವಾಸಿಗಳ ಹಕ್ಕುಗಳ ಹೋರಾಟಗಾರ್ತಿ, ವಕೀಲೆ) ಜೈಲಿನಲ್ಲಿದ್ದಾರೆ. ಸಾಂಭಾಜಿ ಭಿಡೆ ಹೊರಗಿದ್ದಾರೆ’ ಎಂದು ಆಜಾದ್ ಎಂಬುವವರು ಟ್ವೀಟ್ ಮಾಡಿದ್ದಾರೆ.
‘ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು 6 ಕಿಲೋ ಲೀಟರ್ ಗೋಮೂತ್ರ ತುಂಬಿದ ಟ್ಯಾಂಕರ್‌ನಲ್ಲಿ ಸಾಂಭಾಜಿ ಭಿಡೆಯನ್ನು ಕಳುಹಿಸಲಿ’ ಎಂದುನಟರಾಜನ್ ಬಾಲನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
‘ಮಾವು ತಿಂದವರಿಗೆ ಪುತ್ರ ಸಂತಾನ’!
ಕೆಲವು ದಂಪತಿಗಳಿಗೆ ತಮ್ಮ ಮಾವಿನ ತೋಟದಿಂದ ಮಾವಿನ ಹಣ್ಣು ತಿಂದ ಬಳಿಕ ಗಂಡುಮಕ್ಕಳು ಜನಿಸಿದ್ದಾರೆ ಎಂದು ಭಿಡೆ ಹೇಳಿದ್ದು ಈ ಹಿಂದೆ ವಿವಾದಕ್ಕೀಡಾಗಿತ್ತು.
‘ಮಾವಿನಹಣ್ಣು ಸತ್ವಭರಿತ ಮತ್ತು ಪೌಷ್ಟಿಕತೆಯಿಂದ ಕೂಡಿದ್ದಾಗಿದೆ. ನನ್ನ ತೋಟದಿಂದ ಮಾವಿನ ಹಣ್ಣು ತಿಂದ ಕೆಲವು ಸ್ತ್ರೀಯರು ಗಂಡುಮಕ್ಕಳಿಗೆ ಜನ್ಮ ನೀಡಿದ್ದಾರೆ’ ಎಂದು ನಾಸಿಕ್‌ನಲ್ಲಿ ಭಿಡೆ ಹೇಳಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.