ADVERTISEMENT

ಮಹಾರಾಷ್ಟ್ರವು ದ್ರೋಹವನ್ನು ಸಹಿಸದು: ಸರ್ಕಾರ ಪತನವಾಗಲಿದೆ ಎಂದ ಆದಿತ್ಯ ಠಾಕ್ರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಆಗಸ್ಟ್ 2022, 10:25 IST
Last Updated 1 ಆಗಸ್ಟ್ 2022, 10:25 IST
   

ಮುಂಬೈ: ಮಹಾರಾಷ್ಟ್ರ ಎಂದಿಗೂ ವಿಶ್ವಾಸಘಾತುಕತನವನ್ನು ಸಹಿಸುವುದಿಲ್ಲ ಎಂದು ಶಿವಸೇನಾ ಮುಖಂಡ ಹಾಗೂ ಮಾಜಿ ಸಚಿವ ಆದಿತ್ಯ ಠಾಕ್ರೆ ಸೋಮವಾರ ಹೇಳಿದರು.

ಕೊಂಕಣ ಪ್ರದೇಶದ ತಮ್ಮ ಪ್ರವಾಸದ ವೇಳೆ ಶಿವಸೇನಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏಕನಾಥ್ ಶಿಂದೆ ನೇತೃತ್ವದ ಸರ್ಕಾರ ಪತನವಾಗುವುದು ಖಚಿತ. ಕಾರಣ, ಮಹಾರಾಷ್ಟ್ರವು ದ್ರೋಹವನ್ನು ಸಹಿಸುವುದಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಶಿಂದೆ ಸರ್ಕಾರದ ಗಮನವು ‘ಕೊಳಕು ರಾಜಕೀಯ’ದ ಮೇಲೆ ಕೇಂದ್ರೀಕೃತವಾಗಿದೆಯೇ ಹೊರತು ಜನರ ಕಲ್ಯಾಣದ ಮೇಲೆ ಅಲ್ಲವೆಂದು ಅವರು ಹರಿಹಾಯ್ದರು.

ADVERTISEMENT

ರಾಜ್ಯದಲ್ಲಿ ಎಡೆಬಿಡದೆ ಮಳೆ, ಪ್ರವಾಹ ಉಂಟಾಗಿದ್ದರೂ ಸರಕಾರ ತಲೆಕೆಡಿಸಿಕೊಂಡಿಲ್ಲ ಎಂದು ಆದಿತ್ಯ ಠಾಕ್ರೆ ಆರೋಪಿಸಿದರು.

ಭೂ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ಶಿವಸೇನಾ ನಾಯಕ ಸಂಜಯ್‌ ರಾವುತ್‌ ನಿವಾಸದಲ್ಲಿ ಭಾನುವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಆ ನಂತರ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ವಿರುದ್ಧ ಆದಿತ್ಯ ಠಾಕ್ರೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನಾದ 40 ಶಾಸಕರು ಉದ್ಧವ್‌ ಠಾಕ್ರೆ ವಿರುದ್ಧ ಕಳೆದು ತಿಂಗಳು ಬಂಡಾಯ ಎದ್ದಿದ್ದರು. ಇದು ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರ ಪತನಕ್ಕೆ ಕಾರಣವಾಯಿತು.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.