ನವದೆಹಲಿ (ಪಿಟಿಐ): 2050ರ ವೇಳೆಗೆ ದೇಶದಲ್ಲಿ ವಯೋವೃದ್ಧರ ಜನಸಂಖ್ಯೆಯು ದುಪ್ಪಟ್ಟಾಗಲಿದೆ. ಹೀಗಾಗಿ, ಆರೋಗ್ಯ, ವಸತಿ ಮತ್ತು ಪಿಂಚಣಿ ಯೋಜನೆಗಳ ಮೇಲೆ ಹೆಚ್ಚಿನ ಬಂಡವಾಳ ಹೂಡುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಜನಸಂಖ್ಯಾ ಚಟುವಟಿಕೆಗಳ ದತ್ತಿಯ (ಯುಎನ್‌ಎಫ್‌ಪಿಎ) ಭಾರತದ ಪ್ರತಿನಿಧಿ ಆ್ಯಂಡ್ರಿಯಾ ವೊಜ್ನಾರ್ ಹೇಳಿದ್ದಾರೆ.
ವಯೋವೃದ್ಧ ಮಹಿಳೆಯರು ಏಕಾಂಗಿಯಾಗಿ ಮತ್ತು ಬಡತನದಲ್ಲಿ ಬದುಕಬೇಕಾಗ ಅನಿವಾರ್ಯತೆ ಎದುರಿಸುತ್ತಾರೆ ಎಂದು ಅವರು ವಿಶ್ವ ಜನಸಂಖ್ಯಾ ದಿನದ (ಜುಲೈ 11) ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ್ದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಭಾರತದ ಜನಸಂಖ್ಯಾ ಪ್ರವೃತ್ತಿ ಕುರಿತು ಗಮನಸೆಳೆದ ಅವರು, ಯುವಕರು, ವಯೋವೃದ್ಧರ ಜನಸಂಖ್ಯೆ, ನಗರೀಕರಣ, ವಲಸೆ ಮತ್ತು ಹವಾಮಾನ ಬದಲಾವಣೆಯು ದೇಶಕ್ಕೆ ವಿವಿಧ ರೀತಿಯ ಸವಾಲುಗಳನ್ನು ಒಡ್ಡಲಿವೆ ಎಂದರು.
ಇದೇವೇಳೆ, ದೇಶದ ಯುವಜನರ ಜನಸಂಖ್ಯೆಯಲ್ಲೂ ಏರಿಕೆಯಾಗಲಿದೆ. 10ರಿಂದ 19 ವರ್ಷ ವಯೋಮಾನದವರ ಸಂಖ್ಯೆಯು 25.5 ಕೋಟಿ ತಲುಪಲಿದೆ. ಆರೋಗ್ಯ, ಶಿಕ್ಷಣ, ವೃತ್ತಿಪರ ತರಬೇತಿ, ಉದ್ಯೋಗ ಸೃಷ್ಟಿ, ಲಿಂಗ ಸಮಾನತೆಗೆ ಒತ್ತು ನೀಡಿದರೆ ದೇಶದ ಸುಸ್ಥಿರ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ವೊಜ್ನಾರ್ ತಿಳಿಸಿದರು.
ನಗರಾಭಿವೃದ್ಧಿ ಯೋಜನೆಗಳು ಮಹಿಳೆಯರ ಭದ್ರತೆ ಮತ್ತು ಸುರಕ್ಷತೆಗೆ ಒತ್ತು ನೀಡುವಂತಿರಬೇಕು. ಲಿಂಗಸಮಾನತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಮಹಿಳೆಯರಿಗಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು, ಒಟ್ಟಾರೆ ಜೀವನಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು.
ಭಾರತದ ಅಳವಡಿಸಿಕೊಂಡಿರುವ ಕುಟುಂಬ ಯೋಜನೆ ಕಾರ್ಯಕ್ರಮವನ್ನು ಅವರು ಶ್ಲಾಘಿಸಿದರು. ಈ ರೀತಿಯ ಯೋಜನೆ ರೂಪಿಸಿದ ಮೊದಲ ರಾಷ್ಟ್ರ ಭಾರತ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.