ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಬಾಕಿ ಇರುವಂತೆಯೇ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಸಿಪಿಐ ಮುಖಂಡ ಜಿ. ಸುಧಾಕರ ರೆಡ್ಡಿ ಹಾಗೂ ಡಿ. ರಾಜ ಅವರನ್ನು ಶನಿವಾರ ದೆಹಲಿಯಲ್ಲಿ ಭೇಟಿಮಾಡಿ ಮಾತುಕತೆ ನಡೆಸಿದ ನಾಯ್ಡು, ಅಲ್ಲಿಂದ ಲಖನೌಗೆ ಧಾವಿಸಿ ಎಸ್‌ಪಿ– ಬಿಎಸ್‌ಪಿ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ.
ಬಿಜೆಪಿಯೇತರ ಪಕ್ಷಗಳೆಲ್ಲ ಒಂದಾಗಿ ಒಂದು ಬಲಿಷ್ಠ ಮೈತ್ರಿಯನ್ನು ಸ್ಥಾಪಿಸುವ ಬಗ್ಗೆ ನಾಯ್ಡು ಅವರು ರಾಹುಲ್ ಜೊತೆ ಚರ್ಚಿಸಿದ್ದಾರೆ. ಈ ಹಿಂದೆಯೇ ನಾಯ್ಡು ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎಎಪಿ ಮುಖಂಡ ಕೇಜ್ರಿವಾಲ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಜೊತೆ ಮಾತುಕತೆ ನಡೆಸಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ನಾವೆಲ್ಲರೂ ಒಗ್ಗಟ್ಟಾಗಬೇಕಾದ ಅನಿವಾರ್ಯತೆಯನ್ನು ವಿವಿಧ ಪಕ್ಷಗಳ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿರುವ ನಾಯ್ಡು, ಎನ್‌ಡಿಎಗೆ ಬಹುಮತ ಬಾರದಿದ್ದ ಪಕ್ಷದಲ್ಲಿ ನಾವೇನು ಮಾಡಬೇಕು ಎಂಬ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಿಡುವಂತೆ ರಾಹುಲ್ ಅವರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಕೇಂದ್ರದಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ವಿರೋಧಪಕ್ಷಗಳು ಈಗಾಗಲೇ ರಾಜಕೀಯ ಚಟುವಟಿಕೆಗಳನ್ನು ಬಿಡುಸುಗೊಳಿಸಿವೆ. ಅಂತಿಮ ಹಂತದ ಚುನಾವಣೆ ಭಾನುವಾರ ಮುಗಿಯಲಿದ್ದು, ಮೇ 23ರಂದು ಮತ ಎಣಿಕೆ ನಡೆಯಲಿವೆ. ಈಗಾಗಲೇ ನಾಯಕರು ಭೇಟಿಗಳನ್ನು ಆರಂಭಿಸಿದ್ದು, ಫಲಿತಾಂಶ ಬರುವ ಮೊದಲು ರಾಜಕೀಯ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆ ಗೋಚರಿಸುತ್ತಿದೆ.
ಸಿಪಿಎಂ ಮುಖಂಡ ಸೀತಾರಾಂ ಯೆಚುರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನುಶುಕ್ರವಾರ ಭೇಟಿ ಮಾಡಿದ್ದ ನಾಯ್ಡು, ಫಲಿತಾಂಶದ ನಂತರದ ಮೈತ್ರಿ ಕುರಿತು ಮಾತುಕತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.