ADVERTISEMENT

ಸ್ಟ್ರಾಂಗ್‌ ರೂಂಗಳಿಗೆ ರಾತ್ರಿ ಇಡೀ ಕಾವಲು ಕುಳಿತ ಕಾಂಗ್ರೆಸ್‌ ಕಾರ್ಯಕರ್ತರು

ಏಜೆನ್ಸೀಸ್
Published 22 ಮೇ 2019, 7:12 IST
Last Updated 22 ಮೇ 2019, 7:12 IST
   

ನವದೆಹಲಿ: ಮತಯಂತ್ರಗಳ ಅಕ್ರಮದ ಬಗ್ಗೆ ವಿಪಕ್ಷಗಳು ಆತಂಕ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ದೇಶದ ಹಲವುಕಡೆಗಳಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಮತಯಂತ್ರಗಳನ್ನಿಟ್ಟಿರುವ ಸ್ಟ್ರಾಂಗ್‌ ರೂಂಗಳಿಗೆ ಕಾವಲು ಕುಳಿತ ಘಟನೆಗಳನ್ನು ನಡೆದಿವೆ.

ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಚಂಡೀಗಢ ಮುಂತಾದ ಕಡೆಗಳಲ್ಲಿ ಕಾಂಗ್ರೆಸ್‌ ನಾಯಕರು ಮತ್ತು ಸ್ಟ್ರಾಂಗ್‌ ರೂಂಗಳ ಭದ್ರತೆ ಪರಿಶೀಲನೆ ನಡೆಸಿದರು. ಕೆಲವೆಡೆರಾತ್ರಿ ಇಡೀ ಸ್ಟ್ರಾಂಗ್‌ ರೂಂ ಬಳಿ ಕಾವಲು ಕುಳಿತರು.

ಮಧ್ಯಪ್ರದೇಶದ ಭೋಪಾಲ್‌ನಿಂದ್ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಅವರು, ತಮ್ಮ ಕ್ಷೇತ್ರದ ಮತಯಂತ್ರಗಳನ್ನು ಇರಿಸಿರುವ ಭೋಪಾಲಕೇಂದ್ರ ಕಾರಾಗೃಹಕ್ಕೆ ರಾತ್ರಿ ತಮ್ಮ ಪತ್ನಿಯ ಜತೆಗೇ ತೆರಳಿ, ಭದ್ರತಾ ವ್ಯವಸ್ಥೆ ಪರಿಶೀಲಿಸಿದರು. ಉತ್ತರ ಪ್ರದೇಶ ಮೀರತ್‌ ಮತ್ತು ರಾಯಬರೇಲಿ ಕ್ಷೇತ್ರದ ಮತಯಂತ್ರಗಳನ್ನಿಟ್ಟಿರುವ ಸ್ಟ್ರಾಂಗ್‌ ರೂಮ್‌ಗಳಿಗೆ ಕಾಂಗ್ರೆಸ್‌ ಕಾರ್ಯಕರ್ತರು ಕಾವಲು ಕುಳಿತರು.

ADVERTISEMENT

ಇನ್ನು ಚಂಡೀಗಢದಲ್ಲೂ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರದಿಂದಲೂ ಸ್ಟ್ರಾಂಗ್‌ ರೂಂ ಎದುರು ಕುಳಿತಿದ್ದಾರೆ. ಮತಯಂತ್ರಗಳನ್ನು ಯಾರೂ ಈ ಸ್ಥಳದಿಂದ ಬೇರೆ ಕಡೆಗೆ ಸಾಗಿಸಬಾರದೆಂದು ತಾವು ಕಾವಲಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಮುಂಬೈ ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಜಯ್‌ ನಿರೂಪಮ್‌ ಅವರು ಮತಯಂತ್ರಗಳನ್ನಿಟ್ಟ ಗೋರೆಗಾಂವ್‌ ಸ್ಟ್ರಾಂಗ್‌ ರೂಂಗೆ ತೆರಳಿ ಭದ್ರತೆ ಪರಿಶೀಲಿಸಿದರು.

ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಶಿ ತರೂರ್‌ ಅವರು ಸ್ಟ್ರಾಂಗ್‌ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಾವುದೇ ಕ್ಷೇತ್ರದ ಅಭ್ಯರ್ಥಿಯೂ ತನ್ನ ಕ್ಷೇತ್ರದ ಮತಯಂತ್ರಗಳನ್ನಿಟ್ಟ ಸ್ಟ್ರಾಂಗ್‌ ರೂಂಗೆ ತಾನೇ ಸ್ವತಃ ಭದ್ರತೆ ಒದಗಿಸಿಕೊಳ್ಳುವ ಆಥವಾ ಭದ್ರತೆ ಪರಿಶೀಲಿಸಲು ಅವಕಾಶಗಳಿವೆ.

ಲೋಕಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ‘ಮತಯಂತ್ರಗಳನ್ನು ತಿರುಚುವ’ ಆತಂಕಗಳೂ ಬಲಗೊಳ್ಳುತ್ತಿವೆ.ಉತ್ತರ ಪ್ರದೇಶದ ಪೂರ್ವಭಾಗದ ವಾರಾಣಸಿ, ಚಂದೌಲಿ, ಮಿರ್ಜಾಪುರ ಹಾಗೂ ಗಾಜಿಪುರ ಜಿಲ್ಲೆಗಳಿಂದ ಸೋಮವಾರ ರಾತ್ರಿ ಮತಯಂತ್ರಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿದ್ದ ವಿಡಿಯೊಗಳು ವೈರಲ್‌ ಆಗಿವೆ. ಬಿಹಾರ ಮತ್ತು ಪಂಜಾಬ್‌ನಿಂದಲೂ ಇಂತಹ ಆರೋಪಗಳು ಕೇಳಿ ಬಂದಿವೆ.

‘ಇವಿಎಂಗಳನ್ನು ಬದಲಿಸಲಾಗುತ್ತಿದೆ’ ಎಂದು ಆರೋಪಿಸಿಈ ಜಿಲ್ಲೆಗಳ ಎಸ್‌ಪಿ ಹಾಗೂ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಇವಿಎಂಗಳನ್ನು ಸಂಗ್ರಹಿಸಿಟ್ಟಿರುವ ಕಟ್ಟಡದ ಮುಂದೆ ಮಂಗಳವಾರ ರಾತ್ರಿ ಧರಣಿಯನ್ನೂ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.