ಜಲ್ಪೈಗುರಿ (ಪ. ಬಂಗಾಳ): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಜೈ ಶ್ರೀ ರಾಮ್' ಘೋಷಣೆಗಳಿಂದ ಏಕೆ ಕೆರಳುತ್ತಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶ್ನಿಸಿದ್ದಾರೆ.
ಜಲ್ಪೈಗುರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, 'ದೀದಿ ತುಂಬಾ ಆಕ್ರೋಶಗೊಳ್ಳುತ್ತಿದ್ದು, ನೀವು 'ಜೈ ಶ್ರೀರಾಮ್' ಘೋಷಣೆ ಕೂಗಿದರೆ ಜೈಲಿಗೆ ಕಳುಹಿಸುತ್ತಾರೆ. ನನ್ನಿಂದ ಅಥವಾ ಬಿಜೆಪಿಯಿಂದ ಕಿರಿಕಿರಿಯಾಗಿರಬಹುದು. ಆದರೆ 'ಶ್ರೀರಾಮ' ಯಾಕೆ ? ಶ್ರೀರಾಮನ ವಿರುದ್ಧ ಹೋರಾಡಲು ಯಾರಾದರೂ ಧೈರ್ಯ ಮಾಡಿದರೆ ಕೆಟ್ಟ ಫಲಿತಾಂಶವನ್ನು ಎದುರಿಸಬೇಕಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಪತನನಿಶ್ಚಿತ' ಎಂದು ಹೇಳಿದ್ದಾರೆ.
ಮೇ 2ರಂದು ಬಂಗಾಳಕ್ಕೆ ಟಿಎಂಸಿ ಸರ್ಕಾರದಿಂದ ಸ್ವಾತಂತ್ರ್ಯ ದೊರಕಲಿದೆ. ಟಿಎಂಸಿ ಗೂಂಡಾಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ. ಖಂಡಿತವಾಗಿಯೂ ಕಾಂಗ್ರೆಸ್, ಸಿಪಿಎಂ ಮತ್ತು ಟಿಎಂಸಿಯಂತಹ ಪಕ್ಷಗಳು ಅಪರಾಧಿಗಳಿಗೆ ರಕ್ಷಣೆಯನ್ನು ನೀಡಲಿದೆ. ಆದರೆ ಅವರನ್ನು ಜೈಲಿಗೆ ಅಟ್ಟಲಾಗುವುದು ಎಂದು ಹೇಳಿದ್ದಾರೆ.
ಕಳೆದ 10 ವರ್ಷಗಳಿಂದ ಪಶ್ಚಿಮ ಬಂಗಾಳ ಸರ್ಕಾರವು ಜನರನ್ನು ನಿರ್ಲಕ್ಷಿಸಿದ್ದಾರೆ. ಕೇಂದ್ರ ಸರ್ಕಾರದ ಹಲವಾರು ಕಲ್ಯಾಣ ಯೋಜನೆಗಳನ್ನು ಮಮತಾ ಬ್ಯಾನರ್ಜಿ ಸರ್ಕಾರವು ತಡೆಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್ಥಿಕ ನೆರವಿನಿಂದ ಹಿಡಿದು ಪಡಿತರ ಸರಬರಾಜುಗಳ ವರೆಗೆ ಕೇಂದ್ರದಿಂದ ಬಂಗಾಳಕ್ಕೆ ನೀಡಿದ ಎಲ್ಲ ಸಹಾಯವನ್ನು ಟಿಎಂಸಿ ಮುಖಂಡರು ವಂಚಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ಹಣವನ್ನು ಹಿಂಪಡೆಲಾಗುವುದು. ಅದನ್ನು ಬಳಿಕ ರಾಜ್ಯದ ಅಭಿವೃದ್ಧಿಗಾಗಿ ಖರ್ಚು ಮಾಡಲಾಗುವುದು ಎಂದು ನುಡಿದರು.
ಬಂಗಾಳದಲ್ಲಿ ಟಿಎಂಸಿ ಪಕ್ಷವನ್ನು ಉರುಳಿಸಲು ಬಿಜೆಪಿ ಸರ್ವ ಪ್ರಯತ್ನವನ್ನು ಮಾಡುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿಯ ಉನ್ನತ ನಾಯಕರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.