ADVERTISEMENT

ಚುನಾವಣಾ ಬಾಂಡ್‌: ಎಸ್‌ಬಿಐನಿಂದ ಸಮಗ್ರ ವಿವರ ಬಹಿರಂಗ

ವಿಶಿಷ್ಟ ಗುರುತು ಸಂಖ್ಯೆ ಸೇರಿ ಪೂರ್ಣ ಮಾಹಿತಿ ಕೊಟ್ಟ ಎಸ್‌ಬಿಐ

ಪಿಟಿಐ
Published 21 ಮಾರ್ಚ್ 2024, 23:20 IST
Last Updated 21 ಮಾರ್ಚ್ 2024, 23:20 IST
   

ನವದೆಹಲಿ: ವಿಶಿಷ್ಟ ಗುರುತು ಸಂಖ್ಯೆ ಸೇರಿದಂತೆ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಸಮಗ್ರ ವಿವರವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್ (ಎಸ್‌ಬಿಐ) ಒದಗಿಸಿದ್ದು, ಚುನಾವಣಾ ಆಯೋಗ ಇದನ್ನು ಪ್ರಕಟಿಸಿದೆ.

ಬಾಂಡ್‌ಗಳಿಗೆ ನೀಡಲಾಗಿರುವ ವಿಶಿಷ್ಟ ಗುರುತು ಸಂಖ್ಯೆಯಿಂದ ನಿರ್ದಿಷ್ಟ ಬಾಂಡ್‌ ಅನ್ನು ಯಾರು ಖರೀದಿಸಿದ್ದಾರೆ ಹಾಗೂ ಅದನ್ನು ಯಾವ ಪಕ್ಷ ನಗದೀಕರಣ ಮಾಡಿಕೊಂಡಿದೆ ಎಂಬುದು ಬಹಿರಂಗ
ವಾಗಲಿದೆ. 

ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ಸೂಚನೆಯಂತೆ ಸಮಗ್ರ ವಿವರಗಳನ್ನು ನಿಗದಿಪಡಿಸಿದ ಗಡುವಿನ ಒಳಗೆ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಪೂರಕ ಪ್ರಮಾಣ
ಪತ್ರವನ್ನು ಗುರುವಾರ ಸಲ್ಲಿಸಿತು. 

ADVERTISEMENT

ಬಾಂಡ್‌ ಖರೀದಿದಾರರ ಹೆಸರು, ಬಾಂಡ್‌ನ ಮೊತ್ತ, ಅದರ ವಿಶಿಷ್ಟ ಗುರುತು ಸಂಖ್ಯೆ ಹಾಗೂ ಈ ಬಾಂಡ್‌ ನಗದೀಕರಣ ಮಾಡಿಕೊಂಡಿರುವ ರಾಜಕೀಯ ಪಕ್ಷದ ಹೆಸರು, ನಗದೀಕರಿಸಲಾದ ಬಾಂಡ್‌ನ ವಿಶಿಷ್ಟ ಗುರುತು ಸಂಖ್ಯೆ ಹಾಗೂ ಅದರ ಬ್ಯಾಂಕ್ ಖಾತೆ ಸಂಖ್ಯೆಯ ಕಡೆಯ ನಾಲ್ಕು ಅಂಕಿಗಳನ್ನು ಒದಗಿಸಲಾಗಿದೆ ಎಂದು ಎಸ್‌ಬಿಐ ವಿವರಿಸಿದೆ.

ಎಸ್‌ಬಿಐ ಅಧ್ಯಕ್ಷರು ಪ್ರಮಾಣಪತ್ರದಲ್ಲಿ, ‘ಖಾತೆಗಳು ಮತ್ತು ಸೈಬರ್‌ ಭದ್ರತೆಯ ಕಾರಣದಿಂದ ರಾಜಕೀಯ ಪಕ್ಷಗಳ ಬ್ಯಾಂಕ್‌ ಖಾತೆಯ ಪೂರ್ಣ ಸಂಖ್ಯೆ, ಪಕ್ಷಗಳ ಖಾತೆಯ ಕೆವೈಸಿ (ಖಾತೆದಾರರ ವಿವರ) ಮತ್ತು ಬಾಂಡ್‌ ಖರೀದಿದಾರರ ಕೆವೈಸಿಯನ್ನು ಬಹಿರಂಗಪಡಿಸಿಲ್ಲ’ ಎಂದು
ತಿಳಿಸಿದರು.

ಯಥಾವತ್ ವಿವರ ಪ್ರಕಟ: ಆಯೋಗ

ಚುನಾವಣಾ ಬಾಂಡ್‌ಗಳ ಖರೀದಿದಾರರು ಮತ್ತು ಅವುಗಳನ್ನು ನಗದೀಕರಣ ಮಾಡಿಕೊಂಡಿರುವ ಪಕ್ಷಗಳ ಸಮಗ್ರ ವಿವರ ಕುರಿತು ಎರಡು ಪ್ರತ್ಯೇಕ ಪಟ್ಟಿಯನ್ನು ಚುನಾವಣಾ ಆಯೋಗ ಗುರುವಾರ ಪ್ರಕಟಿಸಿತು.

ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ್ದ ಗಡುವಿನೊಳಗೆ ಎಸ್‌ಬಿಐ ಒದಗಿಸಿದ್ದ ವಿವರಗಳನ್ನು ‘ಯಥಾವತ್‌’ ಆಗಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಆಯೋಗವು ತಿಳಿಸಿದೆ. 

ಭಾರತ ರಾಷ್ಟ್ರ ಸಮಿತಿ ಪಕ್ಷಕ್ಕೆ ₹1322 ಕೋಟಿ ದೇಣಿಗೆ 

ಹೈದರಾಬಾದ್‌: ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷ ಚುನಾವಣಾ ಬಾಂಡ್‌ಗಳ ಮೂಲಕ 
₹1,322 ಕೋಟಿ ದೇಣಿಗೆ ಪಡೆದಿದೆ. ಪಕ್ಷವು 2,188 ಚುನಾವಣಾ ಬಾಂಡ್‌ ನಗದೀಕರಣಗೊಳಿಸಿದೆ. ಇದರಲ್ಲಿ ಅರ್ಧದಷ್ಟನ್ನು (₹661 ಕೋಟಿ) ಅ.11, 2018ರಿಂದ ಸೆ.30, 2023ರ ನಡುವೆ ನಾಲ್ಕು ಭಿನ್ನ ದಿನಗಳಂದು ನಗದೀಕರಿಸಿದೆ.

ಎಸ್‌ಬಿಐ ಗುರುವಾರ ಚುನಾವಣಾ ಆಯೋಗಕ್ಕೆ ಒದಗಿಸಿರುವ ವಿವರದಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. ಆ ಪ್ರಕಾರ, ಪಕ್ಷವು 2022ರ ಏಪ್ರಿಲ್‌ 12ರಂದು ₹268 ಕೋಟಿ, 11ರಂದು ₹90 ಕೋಟಿ, 2021ರ ಅಕ್ಟೋಬರ್ 8ರಂದು ₹85 ಕೋಟಿ, 2023ರ ಜುಲೈ 13ರಂದು ₹218 ಕೋಟಿ ಮೊತ್ತವನ್ನು ನಗದೀಕರಣ ಮಾಡಿದೆ.

ಬಿಆರ್‌ಎಸ್‌ ಪಕ್ಷ ಚುನಾವಣಾ ಆಯೋಗಕ್ಕೆ ಈ ಕುರಿತು ಮಾಹಿತಿ ಒದಗಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30, 2023ರವರೆಗೆ ನಗದೀಕರಣ ಮಾಡಿಕೊಂಡಿರುವ ಬಾಂಡ್‌ಗಳ ವಿವರ ದಾಖಲಿಸಬೇಕು ಎಂದು ಆಯೋಗವು ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚಿಸಿತ್ತು.

ಫ್ಯೂಚರ್‌ನಿಂದ ಟಿಎಂಸಿಗೆ ₹540 ಕೋಟಿ

ಗರಿಷ್ಠ ಮೊತ್ತ ದೇಣಿಗೆ ನೀಡಿರುವ ಫ್ಯೂಚರ್‌ ಗೇಮಿಂಗ್ ಆ್ಯಂಡ್‌ ಹೋಟೆಲ್‌ ಸರ್ವೀಸಸ್‌ ಸಂಸ್ಥೆ ಡಿಎಂಕೆ ಅಲ್ಲದೆ, ಇತರೆ ಪ್ರಮುಖ ಪಕ್ಷಗಳಿಗೆ ಬಾಂಡ್‌ಗಳ ಮೂಲಕ ದೇಣಿಗೆ ಒದಗಿಸಿದೆ.

ರಾಜಕೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ಒದಗಿಸಿರುವ ಮಾಹಿತಿ ಅನುಸಾರ, ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ₹540 ಕೋಟಿ, ಬಿಜೆಪಿಗೆ ₹50 ಕೋಟಿ, ವೈಎಸ್‌ಆರ್‌ ಕಾಂಗ್ರೆಸ್‌ಗೆ ₹150 ಕೋಟಿ ದೇಣಿಗೆ ನೀಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.