ನವದೆಹಲಿ: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮೊದಲಿನ ಅತ್ಯಂತ ಮಹತ್ವದ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಚುನಾವಣಾ ಆಯೋಗವು ಶನಿವಾರ ಪ್ರಕಟಿಸಿದೆ. ಕೇಂದ್ರದಲ್ಲಿ ಅಧಿಕಾರ ಹಿಡಿಯಲು ನಿರ್ಣಾಯಕ ಎಂದು ಪರಿಗಣಿಸಲಾಗುವ ಉತ್ತರ ಪ್ರದೇಶ ಹಾಗೂ ಪಂಜಾಬ್, ಉತ್ತರಾಖಂಡ, ಮಣಿಪುರ, ಗೋವಾ ರಾಜ್ಯಗಳಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7 ನಡುವೆ ಮತದಾನ ನಡೆಯಲಿದೆ.
ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಸಲು ಆಯೋಗವು ನಿರ್ಧರಿಸಿದೆ. ಫೆಬ್ರುವರಿ 10, 14, 20, 23, 27, ಮಾರ್ಚ್ 3 ಮತ್ತು 7ರಂದು ಈ ರಾಜ್ಯದಲ್ಲಿ ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆ. 27 ಮತ್ತು ಮಾರ್ಚ್ 3ರಂದು ಎರಡು ಹಂತಗಳಲ್ಲಿ ಮತದಾನ ಆಗಲಿದೆ. ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರುವರಿ 14ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ತೀರ್ಮಾನಿಸಲಾಗಿದೆ.
ಎಲ್ಲ ಐದು ರಾಜ್ಯಗಳಲ್ಲಿ ಮತ ಎಣಿಕೆಯು ಮಾರ್ಚ್ 10ರಂದು ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಐದೂ ರಾಜ್ಯಗಳಲ್ಲಿ ಒಟ್ಟಾಗಿ 18.34 ಕೋಟಿ ಮತದಾರರಿದ್ದಾರೆ. ಅವರಲ್ಲಿ 8.55 ಕೋಟಿ ಮಹಿಳೆಯರು. 24.98 ಲಕ್ಷ ಮಂದಿ ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಅವರಲ್ಲಿ 11.4 ಲಕ್ಷ ಮಂದಿ ಮಹಿಳೆಯರು.
ವಿರೋಧ ಪಕ್ಷಗಳಿಗೆ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆ ಅತ್ಯಂತ ನಿರ್ಣಾಯಕ ಎನಿಸಿಕೊಳ್ಳಲಿದೆ. 2024ರ ಲೋಕಸಭಾ ಚುನಾವಣೆಗೆ ಮುನ್ನ ತಾನಿನ್ನೂ ಪ್ರಸ್ತುತ ಎಂದು ತೋರಿಸಿಕೊಳ್ಳಲು ಈ ಚುನಾವಣೆಯು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ಕೊಟ್ಟಿದೆ.
ತಾನು ಅಧಿಕಾರದಲ್ಲಿರುವ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಮತ್ತೆ ಗೆದ್ದು ಕೇಂದ್ರದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಲು ಬಿಜೆಪಿ ಪ್ರಯತ್ನಿಸಲಿದೆ. ಪಂಜಾಬ್‌ನಲ್ಲಿ ಗೆಲ್ಲಲು ಸಾಧ್ಯವಾಗದೇ ಇದ್ದರೂ ತನ್ನ ಪ್ರಧಾನ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಸ್ಥಾನದಿಂದ ಕಿತ್ತೊಗೆಯಲು ಬಿಜೆಪಿ ಹವಣಿಸಲಿದೆ.
ಈ ವರ್ಷದ ಜುಲೈ–ಆಗಸ್ಟ್‌ನಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯ ಮೇಲೆಯೂ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪರಿಣಾಮ ಬೀರಲಿದೆ. ಶಾಸಕರ ಸಂಖ್ಯೆ ಕಡಿಮೆ ಆದರೆ ಆಡಳಿತಾರೂಢ ಬಿಜೆಪಿಗೆ ಕಷ್ಟ ಎದುರಾಗಬಹುದು. ರಾಜ್ಯಸಭೆಯ ಬಲಾಬಲದ ಮೇಲೆಯೂ ಈ ಬಾರಿಯ ಚುನಾವಣೆಯು ಪರಿಣಾಮ ಉಂಟು ಮಾಡಲಿದೆ. ಏಕೆಂದರೆ, ಉತ್ತರ ಪ್ರದೇಶ ಮತ್ತು ಪಂಜಾಬ್‌ನಿಂದ ಆಯ್ಕೆ ಆಗಿದ್ದ ರಾಜ್ಯಸಭೆಯ 15 ಸದಸ್ಯರು ಜುಲೈನಲ್ಲಿ ನಿವೃತ್ತರಾಗಲಿದ್ದಾರೆ.
ತಾನು ಅಧಿಕಾರದಲ್ಲಿ ಇರುವ ಎಲ್ಲ ನಾಲ್ಕು ರಾಜ್ಯಗಳನ್ನು ಉಳಿಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ.
ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸ್ವಂತ ಬಲ ದಲ್ಲಿಯೇ ಬಿಜೆಪಿ ಅಧಿಕಾರ ಹಿಡಿದಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ದೊಡ್ಡ ಪ್ರಮಾಣದ ಪಕ್ಷಾಂತರದ ಮೂಲಕ ಬಿಜೆಪಿ ಅಧಿಕಾರ ಹಿಡಿಯಿತು.
ಪಂಜಾಬ್‌ನಲ್ಲಿ ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಹರ ಸಾಹಸ ಪಡುತ್ತಿದೆ. ಉತ್ತರಾಖಂಡ ದಲ್ಲಿ ಬಿಜೆಪಿಯಿಂದ ಅಧಿಕಾರ ಕಸಿದು ಕೊಳ್ಳುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಮಣಿಪುರದಲ್ಲಿ ಗೆಲ್ಲುವ ಉತ್ಸಾಹದಲ್ಲಿ ಬಿಜೆಪಿ ಇದೆ.
ಅರವಿಂದ ಕೇಜ್ರಿವಾಲ್ ಅವರ ಎಎಪಿ ಮತ್ತು ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಗೋವಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ.
ಹಾಗಾಗಿ, ಅಲ್ಲಿನ ಚುನಾವಣಾ ಕಣ ಕುತೂಹಲ ಮೂಡಿಸಿದೆ.
15ರವರೆಗೆ ಪಾದಯಾತ್ರೆ, ರ‍್ಯಾಲಿ ಇಲ್ಲ
ಕೋವಿಡ್–19 ಸಾಂಕ್ರಾಮಿಕದ ನಡುವೆ ನಡೆಯುತ್ತಿರುವ ಮೂರನೇ ಚುನಾವಣೆ ಇದಾಗಿದೆ. ಕೋವಿಡ್ ಹರಡುವಿಕೆ ತಡೆಗಾಗಿ ಆಯೋಗವು ಹಲವು ನಿರ್ಬಂಧಗಳನ್ನು ಹೇರಿದೆ. ಮನೆ ಮನೆ ಪ್ರಚಾರಕ್ಕೆ ಅಭ್ಯರ್ಥಿ ಸೇರಿ ಐದು ಮಂದಿಗೆ ಮಾತ್ರ ಅವಕಾಶ ಇದೆ. ಭೌತಿಕ ರ‍್ಯಾಲಿಗಳು, ಪಾದಯಾತ್ರೆಗಳು, ರೋಡ್ ಶೋಗಳನ್ನು ಜನವರಿ 15ರವರೆಗೆ ನಿಷೇಧಿಸಲಾಗಿದೆ. ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 8 ಗಂಟೆಯ ನಡುವಣ ಅವಧಿಯಲ್ಲಿಯೂ ಪ್ರಚಾರಕ್ಕೆ ನಿಷೇಧ ಇದೆ. ವರ್ಚುವಲ್ ಪ್ರಚಾರಕ್ಕೆ ಆದ್ಯತೆ ನೀಡಿ ಎಂದು ಪಕ್ಷಗಳಿಗೆ ಆಯೋಗವು ಸಲಹೆ ಕೊಟ್ಟಿದೆ.
15ರಂದು ಸಭೆ ನಡೆಸಿ ಕೋವಿಡ್ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗುವುದು. ನಿರ್ಬಂಧಗಳನ್ನು ಕೈಬಿಡಬೇಕೇ ಅಥವಾ ಇನ್ನಷ್ಟು ನಿರ್ಬಂಧಗಳನ್ನು ಹೇರಬೇಕೇ ಎಂಬ ನಿರ್ಧಾರವನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು. ಪ್ರಚಾರದ ಅವಧಿಯಲ್ಲಿ ಬಹಿರಂಗ ಪ್ರಚಾರಕ್ಕೆ ಅನುಮತಿ ಇದ್ದಾಗ, ಕೋವಿಡ್ ತಡೆ ಮಾರ್ಗಸೂಚಿಯ ಪಾಲನೆ ಕಡ್ಡಾಯ ಎಂದು ಆಯೋಗ ಹೇಳಿದೆ.
ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪಕ್ಷಗಳ ತಾರಾ ಪ್ರಚಾರಕರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. ರಾಷ್ಟ್ರ ಮಟ್ಟದ ಪಕ್ಷಗಳಿಗೆ 40ರ ಬದಲು 30 ಮತ್ತು ರಾಜ್ಯ ಮಟ್ಟದ ಪಕ್ಷಗಳಿಗೆ 20ರ ಬದಲು 15 ತಾರಾ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶ ಇದೆ.
ರ‍್ಯಾಲಿ ಅಥವಾ ಬಹಿರಂಗ ಸಮಾವೇಶಗಳನ್ನು ನಿಗದಿತ ಸ್ಥಳಗಳಲ್ಲಿಯೇ ನಡೆಸಬೇಕು ಮತ್ತು ಅದಕ್ಕೆ ಜಿಲ್ಲಾಡಳಿತದ ಅನುಮತಿ ಪಡೆದುಕೊಳ್ಳಬೇಕು. ಎಲ್ಲ ಮಾರ್ಗಸೂಚಿಗಳನ್ನು ಅನುಸರಿಸುವುದಾಗಿ ಪಕ್ಷ ಅಥವಾ ಅಭ್ಯರ್ಥಿಯು ಪ್ರಮಾಣಪತ್ರ ಸಲ್ಲಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದ ಪಕ್ಷ ಅಥವಾ ಅಭ್ಯರ್ಥಿಗೆ ರ‍್ಯಾಲಿ ನಡೆಸಲು ಮತ್ತೆ ಅನುಮತಿ ನೀಡಲಾಗುವುದಿಲ್ಲ.
ಮತ ಎಣಿಕೆ ನಂತರ ವಿಜಯೋತ್ಸವಕ್ಕೂ ಅವಕಾಶ ಇಲ್ಲ. ಅಭ್ಯರ್ಥಿ ಅಥವಾ ಅವರ ಅಧಿಕೃತ ಪ್ರತಿನಿಧಿಯ ಜತೆಗೆ ಇಬ್ಬರಿಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಹೋಗಲು ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.