ADVERTISEMENT

ಆರೋಪಗಳಿಗೆ ಉತ್ತರಿಸಿ: JP ನಡ್ಡಾ, ಮಲ್ಲಿಕಾರ್ಜುನ ಖರ್ಗೆಗೆ ಚುನಾವಣಾ ಆಯೋಗ ಸೂಚನೆ

ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಚುನಾವಣಾ ಆಯೋಗಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 14:22 IST
Last Updated 16 ನವೆಂಬರ್ 2024, 14:22 IST
<div class="paragraphs"><p>ಜೆ.ಪಿ.ನಡ್ಡಾ</p></div>

ಜೆ.ಪಿ.ನಡ್ಡಾ

   

–ಪಿಟಿಐ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕುರಿತಂತೆ ಮಾಡಿದ ಆರೋಪಗಳ ಕುರಿತು ಉತ್ತರ ನೀಡುವಂತೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಚುನಾವಣಾ ಆಯೋಗವು ಶನಿವಾರ ಸೂಚನೆ ನೀಡಿದೆ. ಎರಡೂ ಪಕ್ಷಗಳು ಈ ಕುರಿತು ಆಯೋಗಕ್ಕೆ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದವು.

ADVERTISEMENT

ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಸೋಮವಾರ ಮಧ್ಯಾಹ್ನ ಒಂದು ಗಂಟೆಯ ಒಳಗಾಗಿ ಉತ್ತರಿಸುವಂತೆ ಪ್ರತ್ಯೇಕವಾಗಿ ಕಳುಹಿಸಿದ ಪತ್ರದಲ್ಲಿ ತಿಳಿಸಿದೆ. ಜಾರ್ಖಂಡ್‌ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ  ಸೋಮವಾರ ಕೊನೆಯ ದಿನ.

ಪಕ್ಷದ ‘ಸ್ಟಾರ್‌ ಪ್ರಚಾರಕರು’ ಮಾದರಿ ನೀತಿ ಸಂಹಿತೆ ಉಲ್ಲಂಘಿಸುವ ಯಾವುದೇ ಹೇಳಿಕೆಗಳನ್ನು ನೀಡದಂತೆ ಪಕ್ಷವು ನೋಡಿಕೊಳ್ಳಬೇಕು ಎಂದು ಈ ಹಿಂದೆ ಹೊರಡಿಸಿದ್ದ ಸುತ್ತೋಲೆಯನ್ನು ಎರಡೂ ಪಕ್ಷಗಳಿಗೆ ಆಯೋಗವು ನೆನಪಿಸಿದೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಸಂವಿಧಾನವನ್ನು ರದ್ದುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಮುಂಬೈನಲ್ಲಿ ನ.6ರಂದು ನಡೆದ ಚುನಾವಣಾ ಪ್ರಚಾರದಲ್ಲಿ ರಾಹುಲ್‌ ಗಾಂಧಿ ತಿಳಿಸಿದ್ದರು. ಈ ಹೇಳಿಕೆಯು ‘ತಪ್ಪು ಮಾಹಿತಿಯಿಂದ ಕೂಡಿದೆ’ ಎಂದು ಆರೋಪಿಸಿ ಬಿಜೆಪಿಯು ಆಯೋಗಕ್ಕೆ ದೂರು ನೀಡಿತ್ತು.

‘ಜವಾಹರ್‌ಲಾಲ್‌ ನೆಹರೂ, ಇಂದಿರಾ ಗಾಂಧಿ ಹಾಗೂ ರಾಜೀವ್‌ ಗಾಂಧಿ ಅವರು ದಲಿತ, ಬುಡಕಟ್ಟು ಸಮುದಾಯ ಹಾಗೂ ಹಿಂದುಳಿದ ವರ್ಗಗಗಳಿಗೆ ಮೀಸಲಾತಿ ನೀಡಲು ವಿರೋಧಿಸಿದ್ದರು’ ಎಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನ.8ರಂದು ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್‌, ‘ಮೋದಿ ಪ್ರಸ್ತಾಪಿಸಿದ ವಿಚಾರವು ಸುಳ್ಳು, ದುರುದ್ದೇಶಪೂರಿತ ಹಾಗೂ ನಿಂದನೀಯ’ವಾಗಿದೆ ಎಂದು ತಿಳಿಸಿ ಆಯೋಗಕ್ಕೆ ದೂರು ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.