ಹೈದರಾಬಾದ್: ‘ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ್ದ ‘ಜೈ ಭಜರಂಗ ಬಲಿ’ ಘೋಷಣೆಗೆ ಮೌನವಾಗಿದ್ದ ಚುನಾವಣಾ ಆಯೋಗವು, ವಿರೋಧ ಪಕ್ಷಗಳ ಪ್ರತಿ ಹೇಳಿಕೆಗೂ ಆಕ್ಷೇಪ ವ್ಯಕ್ತಪಡಿಸುತ್ತಿದೆ’ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಆರೋಪಿಸಿದ್ದಾರೆ.
ಮಾದ್ಯಮಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ‘ಈ ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಬೇಕೆಂದರೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ಇಲ್ಲವಾದಲ್ಲಿ ದೇಶದ ಜಾತ್ಯಾತೀತ ಪ್ರಜಾಪ್ರಭುತ್ವ ಉಳಿಸಿಕೊಳ್ಳುವುದು ಅಸಾಧ್ಯ’ ಎಂದಿದ್ದಾರೆ.
‘ಕರ್ನಾಟಕದ ಚುನಾವಣೆ ಸಂದರ್ಭದಲ್ಲಿ ಮತದಾರರು ‘ಜೈ ಭಜರಂಗ ಬಲಿ’ ಎಂದು ಹೇಳಿ ಬಿಜೆಪಿಗೆ ಮತ ಹಾಕಿ ಎಂದು ನರೇಂದ್ರ ಮೋದಿ ಹೇಳಿದ್ದರು. ಅದಕ್ಕೆ ಚುನಾವಣಾ ಆಯೋಗ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಆದರೆ, ವಿರೋಧ ಪಕ್ಷಗಳ ಪ್ರತಿ ಹೇಳಿಕೆಗೂ ಆಯೋಗ ನೋಟಿಸ್ ಜಾರಿ ಮಾಡುತ್ತಿದೆ. ಜತೆಗೆ ಕ್ರಮ ಜರುಗಿಸುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ರಾಜಸ್ಥಾನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಕೇಸರಿ ಪಕ್ಷಕ್ಕೆ ಇದು ತೀವ್ರ ತಲೆನೋವಾಗಿದೆ. ತೆಲಂಗಾಣದಲ್ಲಿ ಯಚೂರಿ ಅವರು ಸಿಪಿಎಂ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.