ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ದಾಳಿ ನಡೆದಿದೆ ಎಂಬ ವರದಿಯನ್ನು ಭಾರತದ ಚುನಾವಣಾ ಆಯೋಗ(ಇಸಿಐ)ವು ತಳ್ಳಿಹಾಕಿದೆ.
ಆಯೋಗ ನೇಮಕ ಮಾಡಿದ್ದ ಪಶ್ಚಿಮ ಬಂಗಾಳದ ಚುನಾವಣಾ ವೀಕ್ಷಕರು ಮತ್ತು ಮುಖ್ಯ ಕಾರ್ಯದರ್ಶಿಯ ವರದಿಯನ್ನು ಆಧರಿಸಿ ಚುನಾವಣಾ ಆಯೋಗ ಈ ನಿರ್ಧಾರ ಕೈಗೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಬುಧವಾರ ಸಂಜೆ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರ ನಡೆಸುತ್ತಿದ್ದಾಗ ಅಪರಿಚಿತರಿಂದ ತಳ್ಳಲ್ಪಟ್ಟ ಮಮತಾ ಬ್ಯಾನರ್ಜಿ ಕೆಳಗೆ ಬಿದ್ದು ಎಡಗಾಲಿಗೆ ಮತ್ತು ಸೊಂಟಕ್ಕೆ ಗಾಯಗಳಾಗಿವೆ ಎಂಬ ವರದಿಗಳು ಬಂದಿದ್ದವು. ಬಳಿಕ ಟಿಎಂಸಿ ವರಿಷ್ಠೆ, ಪೂರ್ವ ಮೇದಿನಿಪುರ್ ಜಿಲ್ಲೆಯಿಂದ ಗ್ರೀನ್ ಕಾರಿಡಾರ್ ಮೂಲಕ ತೆರಳಿ ಕೋಲ್ಕತ್ತಾದ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಾಗಿದ್ದರು.
ಘಟನೆ ಬಳಿಕ, ಚುನಾವಣಾ ಆಯೋಗವು ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯ, ವಿಶೇಷ ವೀಕ್ಷಕ ಅಜಯ್ ನಾಯಕ್ ಮತ್ತು ವಿಶೇಷ ಪೊಲೀಸ್ ವೀಕ್ಷಕ ವಿವೇಕ್ ದುಬೆ ಅವರಿಂದ ಶುಕ್ರವಾರ ಸಂಜೆ ವರದಿ ಪಡೆದಿತ್ತು.
ತಮ್ಮ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ಮಮತಾ ಬ್ಯಾನರ್ಜಿ ಪದೇ ಪದೇ ಮನವಿ ಮಾಡಿದ ಬಳಿಕ ಶುಕ್ರವಾರ ಸಂಜೆ ವೈದ್ಯರು ಅವರನ್ನು ಡಿಸ್ಚಾರ್ಜ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.