ADVERTISEMENT

ಇದು ಬಡವರು – ಕೋಟ್ಯಧಿಪತಿಗಳ ನಡುವಿನ ಚುನಾವಣೆ: ರಾಹುಲ್ ಗಾಂಧಿ

ಪಿಟಿಐ
Published 11 ಏಪ್ರಿಲ್ 2024, 12:17 IST
Last Updated 11 ಏಪ್ರಿಲ್ 2024, 12:17 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ಪಿಟಿಐ

ಜೈಪುರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೇಳುತ್ತಿದ್ದಾರೆ, ಯುವಜನರು ಉದ್ಯೋಗ ಬಯಸುತ್ತಿದ್ದಾರೆ, ಮಹಿಳೆಯರು ಹಣದುಬ್ಬರದಿಂದ ನಮ್ಮನ್ನು ಕಾಪಾಡಿ ಎಂದು ಕೇಳುತ್ತಿದ್ದಾರೆ. ಆದರೆ, ಯಾರೂ ಅವರ ಕಷ್ಟ ಕೇಳುತ್ತಿಲ್ಲ ಎಂದು ಹೇಳಿದರು.

ADVERTISEMENT

ರಾಜಸ್ಥಾನದ ಬಿಕಾನೇರ್ ಲೋಕಸಭಾ ಕ್ಷೇತ್ರದ ಅನುಪ್‌ಗಢದ ರ್‍ಯಾಲಿಯಲ್ಲಿ ಭಾಗವಹಿಸಿದ್ದ ಅವರು, ‘ಇದು ಹಿಂದುಳಿದವರು, ದಲಿತರು, ಆದಿವಾಸಿಗಳು ಮತ್ತು ಬಡವರು ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸುತ್ತಿರುವ ಚುನಾವಣೆ’ ಎಂದು ಹೇಳಿದರು.

‘ಇಂದು ದೇಶದ ಅತಿ ದೊಡ್ಡ ಸಮಸ್ಯೆ ಎಂದರೆ ನಿರುದ್ಯೋಗ. ನಂತರದ್ದು ಹಣದುಬ್ಬರ. ಶೇ 90ರಷ್ಟು ಮಂದಿ ಹಣದುಬ್ಬರ ಇದೆ ಎನ್ನುತ್ತಾರೆ. ಆದರೆ, ಮಾಧ್ಯಮಗಳು 24 ಗಂಟೆಯೂ ಅಂಬಾನಿ ಮಗನ ವಿವಾಹ ಕಾರ್ಯಕ್ರಮ, ಪ್ರಧಾನಿ ಮೋದಿ ಮುಖವನ್ನೇ ತೋರಿಸುತ್ತಿರುತ್ತವೆ. ಒಮ್ಮೆ ಅವರು ಸಮುದ್ರದ ಒಳಗೆ ಹೋಗುತ್ತಾರೆ. ಮತ್ತೊಮ್ಮೆ ಸಮುದ್ರದ ಮೇಲೆ ವಿಮಾನದಲ್ಲಿ ಹಾರುತ್ತಾರೆ. ಇನ್ನೊಮ್ಮೆ ತಟ್ಟೆ ಬಡಿಯುತ್ತಾರೆ. ಹಲವು ಸಲ ಅವರು ಮೊಬೈಲ್‌ನಲ್ಲಿ ಫ್ಲ್ಯಾಶ್‌ಲೈಟ್ ತೋರಿಸಿ ಎಂದು ಜನರಿಗೆ ಮನವಿ ಮಾಡುತ್ತಾರೆ’ ಎಂದು ರಾಹುಲ್ ಟೀಕಿಸಿದರು.

ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಯಿತು. ಆದರೆ ಆಡಳಿತಾರೂಢ ಬಿಜೆಪಿಯು ದೊಡ್ಡ ಉದ್ದಿಮೆದಾರರಿಂದ ಚುನಾವಣಾ ಬಾಂಡ್‌ಗಳ ಮೂಲಕ ಹಣ ಪಡೆಯಿತು.
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

‘ಮೋದಿ ಅವರು ದೇಶದ ಅತ್ಯಂತ ಶ್ರೀಮಂತ 25–30 ಮಂದಿಯ ಸಾಲ ಮನ್ನಾ ಮಾಡಿದರು. ಆ ಹಣದಿಂದ 24 ವರ್ಷ ಮನರೇಗಾ ಕೂಲಿ ಪಾವತಿಸಬಹುದಿತ್ತು. ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರೈತರು ತೆರಿಗೆ ಕಟ್ಟುತ್ತಿದ್ದಾರೆ’ ಎಂದು ಟೀಕಿಸಿದರು.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾಡುವ ಮೊದಲ ಕೆಲಸ ಜಾತಿ ಜನಗಣತಿ. ಹಾಗೆಯೇ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಗುತ್ತಿಗೆ ಕಾರ್ಮಿಕರ ಪದ್ಧತಿಯನ್ನು ಕ್ರಮೇಣ ನಿಲ್ಲಿಸಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಗಳಾಗಿದ್ದ ಬಿಕಾನೇರ್‌ನ ಗೋವಿಂದ ರಾಮ ಮೇಘವಾಲ್ ಮತ್ತು ಗಂಗಾನಗರದ ಕುಲ್‌ದೀಪ್ ಇಂದೋರಾ ಪರವಾಗಿ ರಾಹುಲ್ ಪ್ರಚಾರ ಮಾಡಿದರು.

‘ಬಡವರು ಮತ್ತು ಕೋಟ್ಯಧಿಪತಿಗಳ ನಡುವಿನ ಚುನಾವಣೆ’

‘ಪ್ರಸ್ತುತ ಲೋಕಸಭಾ ಚುನಾವಣೆಯು ದೇಶದ ಬಡವರು ಮತ್ತು 20–25 ಮಂದಿ ಕೋಟ್ಯಧಿಪತಿಗಳ ನಡುವಿನ ಚುನಾವಣೆ’ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.

‘ಅಲ್ಪಾವಧಿಯ ಉದ್ಯೋಗದ ‘ಅಗ್ನಿಪಥ’ ಯೋಜನೆ ಬೇಕಿರಲಿಲ್ಲ. ಆದರೆ ಮೋದಿ ಅವರು ಪ್ರಧಾನಿ ಕಾರ್ಯಾಲಯದಿಂದ ಅದನ್ನು ಜಾರಿ ಮಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ ನಂತರ ಯೋಜನೆಯನ್ನು ರದ್ದುಪಡಿಸಲಾಗುವುದು’ ಎಂದು ಅವರು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.