ADVERTISEMENT

ಆಯ್ಕೆ ಪ್ರಶ್ನಿಸಿ ಅರ್ಜಿ: ಕಂಗನಾ ರನೌತ್‌ಗೆ ಹಿಮಾಚಲ ಪ್ರದೇಶ ಹೈಕೋರ್ಟ್ ನೋಟಿಸ್‌

ಪಿಟಿಐ
Published 25 ಜುಲೈ 2024, 4:45 IST
Last Updated 25 ಜುಲೈ 2024, 4:45 IST
Kangana Ranaut
Kangana Ranaut   

ಶಿಮ್ಲಾ: ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರನೌತ್ ಅವರ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹಿಮಾಚಲ ಪ್ರದೇಶ ಹೈಕೋರ್ಟ್, ಅವರಿಗೆ ನೋಟಿಸ್‌ ಜಾರಿ ಮಾಡಿದೆ.

ಆಗಸ್ಟ್‌ 21ರ ಒಳಗಾಗಿ ಉತ್ತರ ನೀಡಬೇಕು ಎಂದು ನ್ಯಾಯಮೂರ್ತಿ ಜೋತ್ಸ್ನಾ ರೆವಾಲ್ ಅವರು ನೋಟಿಸ್ ನೀಡುವ ವೇಳೆ ನಿರ್ದೇಶನ ನೀಡಿದ್ದಾರೆ.

ಕಳೆದ ಲೋಕಸಭೆ ಚುನಾವಣೆ ವೇಳೆ ತನ್ನ ನಾಮಪತ್ರವನ್ನು ಚುನಾವಣಾ ಅಧಿಕಾರಿ (ಮಂಡಿಯ ಜಿಲ್ಲಾಧಿಕಾರಿ) ಅನ್ಯಾಯವಾಗಿ ತಿರಸ್ಕರಿಸಿದ್ದರು ಎಂದು ಕಿನ್ನೂರು ನಿವಾಸಿ ಲಾಯಕ್ ರಾಮ್ ನೇಗಿ ಎಂಬವರು ದೂರು ಸಲ್ಲಿಸಿದ್ದರು. ಅಲ್ಲದೆ ಜಿಲ್ಲಾಧಿಕಾರಿಯವರನ್ನೂ ಪಕ್ಷಗಾರರನ್ನಾಗಿ ಮಾಡಿದ್ದರು.

ADVERTISEMENT

ಅರಣ್ಯ ಇಲಾಖೆಯ ಮಾಜಿ ಅಧಿಕಾರಿಯಾಗಿರುವ ನೇಗಿ, ಮೇ 14ರಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮೇ 15ರಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು. ಆದರೆ ಚುನಾವಣಾ ಅಧಿಕಾರಿ ಅದನ್ನು ಸ್ವೀಕರಿಸಿರಲಿಲ್ಲ ಎಂದು ನೇಗಿ ಆರೋಪಿದ್ದಾರೆ.

‘ವಿದ್ಯುತ್, ದೂರವಾಣಿ ಹಾಗೂ ನೀರಾವರಿ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು. ಅದಕ್ಕೆ ಒಂದು ದಿನದ ಅವಕಾಶ ನೀಡಲಾಗಿತ್ತು. ಆದರೆ ದಾಖಲೆಗಳನ್ನು ಸಲ್ಲಿಸುವಾಗ ಅದನ್ನು ಸ್ವೀಕರಿಸಲು ಚುನಾವಣಾಧಿಕಾರಿ ನಿರಾಕರಿಸಿ, ನಾಮಪತ್ರವನ್ನು ತಿರಸ್ಕರಿಸಿದ್ದರು’ ಎಂದು ನೇಗಿ ದೂರಿನಲ್ಲಿ ಹೇಳಿದ್ದರು.

‘ಒಂದು ವೇಳೆ ತಿರಸ್ಕೃತವಾಗದಿದ್ದರೆ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸುತ್ತಿದ್ದೆ. ಹೀಗಾಗಿ ಮಂಡಿ ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಬೇಕು’ ಎಂದು ಅವರು ಕೋರಿದ್ದರು.

ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಅವರನ್ನು 74,775 ಮತಗಳ ಅಂತರದಿಂದ ಸೋಲಿಸಿ ಕಂಗನಾ ರನೌತ್‌ ಗೆಲುವು ಸಾಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.