ADVERTISEMENT

ಚುನಾವಣೆ ಇರುವ 5 ರಾಜ್ಯಗಳಲ್ಲಿ ರ್‍ಯಾಲಿ ನಿಷೇಧ: 22ರವರೆಗೆ ವಿಸ್ತರಣೆ

ಪಿಟಿಐ
Published 15 ಜನವರಿ 2022, 19:37 IST
Last Updated 15 ಜನವರಿ 2022, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಧಾನಸಭೆಗೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಭೌತಿಕ ರ್‍ಯಾಲಿಗಳು, ರೋಡ್‌ ಶೋಗಳ ಮೇಲಿನ ನಿಷೇಧವನ್ನು ಚುನಾವಣಾ ಆಯೋಗವು ಇದೇ 22ರವರೆಗೆ ವಿಸ್ತರಿಸಿ ಶನಿವಾರ ಆದೇಶ ಹೊರಡಿಸಿದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯ ಆಧಾರದಲ್ಲಿ ನಿರ್ಧಾರದ ಮರುಪರಿಶೀಲನೆ ಆಗಲಿದೆ ಎಂದು ಆಯೋಗವು ತಿಳಿಸಿದೆ.

ಹಾಗಿದ್ದರೂ ರಾಜಕೀಯ ಪಕ್ಷಗಳಿಗೆ ಒಂದು ವಿನಾಯಿತಿಯನ್ನು ಆಯೋಗವು ನೀಡಿದೆ. ಒಳಾಂಗಣ ಸಭೆಗಳನ್ನು ನಡೆಸಲು ಅವಕಾಶ ಕೊಟ್ಟಿದೆ. ಆದರೆ, ಸಭಾಂಗಣದ ಸಾಮರ್ಥ್ಯದ ಶೇ 50ರಷ್ಟು ಅಥವಾ ಗರಿಷ್ಟ 300 ಮಂದಿ ಸೇರಲು ಮಾತ್ರ ಅವಕಾಶ ಇದೆ. ಅಥವಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ನಿಗದಿ ಮಾಡಿದ ಮಿತಿಯನ್ನು ಪಾಲಿಸಬೇಕು ಎಂದು ಆಯೋಗವು ಸೂಚಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಜತೆಗೆ ಶನಿವಾರ ನಡೆಸಿದ ವರ್ಚುವಲ್‌ ಸಭೆ ಮತ್ತು ಚುನಾವಣೆ ನಡೆಯಲಿರುವ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳ ಜತೆಗೆ ನಡೆಸಿದ ಸಭೆಯಲ್ಲಿ ದೊರೆತ ಮಾಹಿತಿಯ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.

ADVERTISEMENT

ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಬೇಕು, ಕೋವಿಡ್‌ ಹರಡುವಿಕೆ ತಡೆ ನಿಯಮಗಳನ್ನು ಪಾಲಿಸಬೇಕು ಎಂದು ರಾಜಕೀಯ ಪಕ್ಷಗಳಿಗೆ ಆಯೋಗವು ನಿರ್ದೇಶನ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.