ಮುಂಬೈ: ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಶುಕ್ರವಾರ ಅಧಿಕೃತವಾಗಿ ಶಿವಸೇನಾ ಸೇರಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಚತುರ್ವೇದಿಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದರು. ಮಹಾರಾಷ್ಟ್ರದ ಕಾಂಗ್ರೆಸ್ ಘಟಕದಲ್ಲಿ ಹಾಗೂ ಪಕ್ಷದ ವಕ್ತಾರೆಯಾಗಿಯೂ ಕೆಲಸ ಮಾಡಿದ್ದಾರೆ. ರಾಜೀನಾಮೆ ಪತ್ರವನ್ನು ರಾಹುಲ್ ಗಾಂಧಿ ಅವರಿಗೆ ರವಾನಿಸಿರುವುದಾಗಿ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
ಹತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಆದರೆ ಮಹಿಳೆಯರು ಮತ್ತು ಮಹಿಳಾ ಸಂಬಂಧಿತ ವಿಚಾರಗಳಿಗೆ ಕಾಂಗ್ರೆಸ್‌ನಲ್ಲಿ ಮಾನ್ಯತೆ ಸಿಗದಿರುವ ಹಿನ್ನೆಲೆಯಲ್ಲಿಪಕ್ಷ ಬಿಡಬೇಕಾಯಿತು ಎಂದು ಪ್ರಿಯಾಂಕ ಚತುರ್ವೇದಿ ಹೇಳಿಕೊಂಡಿದ್ದಾರೆ.
2018ರ ಸೆಪ್ಟೆಂಬರ್‌ನಲ್ಲಿ ಉತ್ತರಪ್ರದೇಶದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಕಾರ್ಯಕರ್ತರು ನನ್ನ ಜೊತೆ ವರ್ತಿಸಿದ ರೀತಿ ನನಗೆ ತುಂಬಾ ಬೇಸರ ತರಿಸಿತ್ತು. ಈ ಬಗ್ಗೆ ಪ್ರಿಯಾಂಕ ವಾದ್ರಾ ಮತ್ತು ಜ್ಯೋತಿರಾದಿತ್ಯ ಸಿಂಧ್ಯ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಆ ಘಟನೆಯ ಬಳಿಕ ನಾನು ತುಂಬಾ ನೊಂದು ಕೊಂಡಿದ್ದೆಎಂದು ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಿವಾಸದಲ್ಲಿ ಪ್ರಿಯಾಂಕ ಚತುರ್ವೇದಿ ಶಿವಸೇನಾಗೆ ಅಧಿಕೃತವಾಗಿಸೇರ್ಪಡೆಯಾಗಿದ್ದಾರೆ. ಈ ಸಂದರ್ಭದಲ್ಲಿ ಉದ್ಧವ್ ಪುತ್ರ ಆದಿತ್ಯಾ ಠಾಕ್ರೆ ಉಪಸ್ಥಿತರಿದ್ದರು.
ಶಿವಸೇನೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವ ಇದೆ ಎಂಬುದನ್ನು ನಾನು ಮಹಾರಾಷ್ಟ್ರದ ಮಹಿಳೆಯಾಗಿ ತಿಳಿದಿದ್ದೇನೆ ಎಂದು ಪ್ರಿಯಾಂಕ ಚತುರ್ವೇದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.