ADVERTISEMENT

ಚುನಾವಣಾ ಬಾಂಡ್: ಎಸ್‌ಐಟಿ ತನಿಖೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪಿಟಿಐ
Published 24 ಏಪ್ರಿಲ್ 2024, 15:49 IST
Last Updated 24 ಏಪ್ರಿಲ್ 2024, 15:49 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ರಾಜಕಾರಣಿಗಳು, ಕಾರ್ಪೊರೇಟ್‌ ಕಂಪನಿಗಳು ಹಾಗೂ ತನಿಖಾ ಸಂಸ್ಥೆಗಳ ನಡುವೆ ಚುನಾವಣಾ ಬಾಂಡ್‌ಗಳ ವಿಷಯದಲ್ಲಿ ಇರುವ ಅನೈತಿಕ ‘ಕೊಡು–ಕೊಳುವಿಕೆ’ಯ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಲಾಗಿದೆ. 

ತನಿಖೆಯು ಸುಪ್ರೀಂ ಕೋರ್ಟ್‌ ನಿಗಾದಲ್ಲಿಯೇ ನಡೆಯಬೇಕು ಎಂದೂ ಕೇಳಲಾಗಿದೆ. 

ಶೆಲ್‌ ಕಂಪನಿಗಳು ಹಾಗೂ ನಷ್ಟ ಅನುಭವಿಸುತ್ತಿರುವ ಕಂಪನಿಗಳೂ ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವುದಾಗಿ ಎಸ್‌ಬಿಐ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವ ದತ್ತಾಂಶ ಹೇಳುತ್ತದೆ. ಇಂತಹ ಕಂಪನಿಗಳ ಮೂಲ ಏನು ಎನ್ನುವುದನ್ನು ಪತ್ತೆ ಮಾಡಬೇಕು. ಆ ಹಣವನ್ನು ರಾಜಕೀಯ ಪಕ್ಷಗಳಿಂದ ಮರಳಿ ವಸೂಲು ಮಾಡುವ ಮಾರ್ಗವನ್ನೂ ಹುಡುಕುವಂತೆ ತನಿಖಾ ತಂಡಕ್ಕೆ ನಿರ್ದೇಶಿಸಬೇಕು ಎಂದು ಪ್ರಶಾಂತ್ ಭೂಷಣ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಕೋರಲಾಗಿದೆ. 

ADVERTISEMENT

‘ಕಾಮನ್‌ ಕಾಸ್‌’ ಹಾಗೂ ‘ಸೆಂಟರ್‌ ಫಾರ್‌ ಪಬ್ಲಿಕ್‌ ಇಂಟರೆಸ್ಟ್‌ ಲಿಟಿಗೇಷನ್‌’ ಸರ್ಕಾರೇತರ ಸಂಸ್ಥೆಗಳು, ಪ್ರಶಾಂತ್ ಭೂಷಣ್ ಅವರ ಮೂಲಕ ಅರ್ಜಿ ಸಲ್ಲಿಸಿವೆ. 

ಚುನಾವಣಾ ಬಾಂಡ್‌ ಯೋಜನೆಯನ್ನು ಫೆಬ್ರುವರಿ 15ರಂದು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠ ರದ್ದುಪಡಿಸಿ, ಆದೇಶ ನೀಡಿತ್ತು. 2018ರಲ್ಲಿ ಈ ಚುನಾವಣಾ ಬಾಂಡ್‌ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 

ಎಸ್‌ಐಟಿ ರಚಿಸುವ ಭರವಸೆ: ಚುನಾವಣಾ ಬಾಂಡ್‌ ಕುರಿತು ಸುಪ್ರೀಂ ಕೋರ್ಟ್ ಎಸ್‌ಐಟಿ ತನಿಖೆಗೆ ತಂಡ ರಚಿಸುವುದನ್ನು ಎದುರುನೋಡುತ್ತಿರುವುದಾಗಿ ಹೇಳಿರುವ ಸಿಪಿಐ ಮುಖಂಡ ಸೀತಾರಾಂ ಯಚೂರಿ, ಚುನಾವಣಾ ಬಾಂಡ್‌ ಎನ್ನುವುದು ‘ವಸೂಲಿ ಮಾಫಿಯಾ ಮಾದರಿಯದ್ದು’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.