ಮುಂಬೈ: ಎಲ್ಗಾರ್ ಪರಿಷದ್–ಮಾವೊವಾದಿ ಸಂಪರ್ಕ ಪ್ರಕರಣದ ಆರೋಪಿ, ವಕೀಲೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರನ್ನು ಇಲ್ಲಿರುವ ವಿಶೇಷ ಎನ್‌ಐಎ ಕೋರ್ಟ್ ಮುಂದೆ ಬುಧವಾರ ಹಾಜರುಪಡಿಸಲಾಯಿತು.
₹ 50 ಸಾವಿರ ಭದ್ರತೆ ಸಲ್ಲಿಸಿದ ನಂತರಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ವಿಶೇಷ ನ್ಯಾಯಾಧೀಶ ಡಿ.ಇ.ಕೋಥಳೀಕರ್ ಆದೇಶಿಸಿದರು.
ಭದ್ರತೆಯನ್ನು ನಗದು ರೂಪದಲ್ಲಿ ಪಾವತಿಸಲು ಕೋರ್ಟ್ ಅನುಮತಿ ನೀಡಿತು. ಅವರು ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿಯೇ ವಾಸ ಮಾಡಬೇಕು ಹಾಗೂ ಕೋರ್ಟ್ ಅನುಮತಿ ಇಲ್ಲದೇ ಮುಂಬೈ ತೊರೆಯಬಾರದು ಎಂಬ ಷರತ್ತುಗಳನ್ನು ವಿಧಿಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಅವರನ್ನು 2018ರ ಅ.27ರಂದು ಬಂಧಿಸಿದ್ದರು. ತನಿಖಾಧಿಕಾರಿಯ ಕರ್ತವ್ಯ ಲೋಪದಿಂದ ಸಿಗಬಹುದಾದ ಜಾಮೀನನ್ನು ಸುಧಾ ಭಾರದ್ವಾಜ್ ಅವರಿಗೆ ಬಾಂಬೆ ಹೈಕೋರ್ಟ್ ಡಿ.1ರಂದು ಮಂಜೂರು ಮಾಡಿತ್ತು.
ಬಾಂಬೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಎನ್‌ಐಎ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ (ಡಿ.7) ವಜಾಗೊಳಿಸಿತ್ತು. ಅಲ್ಲದೇ, ಜೈಲಿನಿಂದ ಅವರನ್ನು ಬಿಡುಗಡೆ ಮಾಡುವ ದಿನಾಂಕ ಹಾಗೂ ಷರತ್ತುಗಳಿಗೆ ಸಂಬಂಧಿಸಿ ನಿರ್ಧರಿಸುವಂತೆ ವಿಶೇಷ ಎನ್‌ಐಎ ಕೋರ್ಟ್‌ಗೆ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.