ADVERTISEMENT

ದೇಶದ ವಿರುದ್ಧ ಯುದ್ಧ ಬಯಸಿದ್ದ ಎಲ್ಗಾರ್ ಪರಿಷತ್ ಆರೋಪಿಗಳು: ಎನ್‌ಐಎ

ಪಿಟಿಐ
Published 23 ಆಗಸ್ಟ್ 2021, 6:53 IST
Last Updated 23 ಆಗಸ್ಟ್ 2021, 6:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ದೇಶದ ವಿರುದ್ಧ ಯುದ್ಧ ಘೋಷಿಸಿ, ತನ್ನದೇ ಸರ್ಕಾರ ಸ್ಥಾಪಿಸುವುದು ಆರೋಪಿಗಳ ಗುರಿಯಾಗಿದೆ’ ಎಂದು ಎಲ್ಗಾರ್ ಪರಿಷತ್ – ಮಾವೊವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳವು(ಎನ್‌ಐಎ) ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಈ ತಿಂಗಳ ಆರಂಭದಲ್ಲಿ ಎಲ್ಗಾರ್ ಪರಿಷತ್ – ಮಾವೊವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿಯನ್ನು ಸಲ್ಲಿಸಿದೆ. ಇದರ ಪ್ರತಿ ಸೋಮವಾರ ಲಭ್ಯವಾಗಿದೆ. ಈ ದೋಷಾರೋಪ ಪಟ್ಟಿಯಲ್ಲಿ ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ 15 ಆರೋಪಿಗಳ ವಿರುದ್ಧ 17 ಆರೋಪಗಳನ್ನು ಮಾಡಲಾಗಿದೆ. ಈ ಆರೋಪಿಗಳ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯಡಿ (ಐಪಿಸಿ) ಆರೋಪಗಳನ್ನು ದಾಖಲಿಸುವಂತೆ ನ್ಯಾಯಾಲಯಕ್ಕೆ ಕೋರಲಾಗಿದೆ.

‘ಆರೋಪಿಗಳು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದಾರೆ. ಈ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭಾರದ್ವಾಜ್‌ , ವರ್ನನ್‌ ಗೊನ್ಸಾಲ್ವೆಸ್‌, ವರವರ ರಾವ್, ಹನಿ ಬಾನು, ಆನಂದ್‌ ತೇಲ್ತುಂಬ್ಡೆ, ಶೋಮ ಸೇನ್‌, ಗೌತಮ್‌ ನವಲಖಾ ಸೇರಿದಂತೆ ಇತರನ್ನು ಬಂಧಿಸಲಾಗಿದೆ. ಕ್ರಾಂತಿ ಮತ್ತು ಸಶಸ್ತ್ರ ಹೋರಾಟದ ಮೂಲಕ ರಾಜ್ಯದಿಂದ ಅಧಿಕಾರ ಕಸಿದು, ‘ಜನತಾ ಸರ್ಕಾರ’ ಸ್ಥಾಪಿಸುವುದೇ ಇವರ ಗುರಿ’ ಎಂದು ಎನ್‌ಐಎ ದೂರಿದೆ.

ADVERTISEMENT

ಮಹಾರಾಷ್ಟ್ರ ಸರ್ಕಾರ ಮತ್ತು ಭಾರತ ಸರ್ಕಾರದ ವಿರುದ್ಧ ಯುದ್ಧ ನಡೆಸಲು ಆರೋಪಿಗಳು ಸಂಚು ರೂಪಿಸಿದ್ದರು. ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಭೆಯಲ್ಲಿ ಆರೋಪಿಗಳು ಪ್ರಚೋದನಕಾರಿ ಹಾಡುಗಳು ಮತ್ತು ಕಿರು ನಾಟಕಗಳನ್ನು ಪ್ರದರ್ಶಿಸಿದ್ದರು. ಅಲ್ಲದೆ ನಕ್ಸಲ್‌ ಸಾಹಿತ್ಯಗಳನ್ನು ವಿತರಿಸಿದ್ದರು ಎಂದು ದೋಷಾರೋಪ ಪಟ್ಟಿಯಲ್ಲಿ ಹೇಳಲಾಗಿದೆ.

‘ಭಾರತದ ಭೂ ಪ್ರದೇಶಗಳನ್ನು ಪ್ರತ್ಯೇಕಗೊಳಿಸಲು ಆರೋಪಿಗಳು ಜನರನ್ನು ಉತ್ತೇಜಿಸುತ್ತಿದ್ದರು. ಸ್ಫೋಟಕ ವಸ್ತುಗಳ ಮೂಲಕ ಜನರನ್ನು ಬೆದರಿಸುತ್ತಿದ್ದರು. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸ್ ನಂತಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಭಯೋತ್ಪಾದನೆ ಕೃತ್ಯಗಳಿಗೆ ಬಳಸಿಕೊಳ್ಳಲು ತನ್ನಗುಂಪಿಗೆ ಸೇರ್ಪಡೆಗೊಳಿಸಿದ್ದಾರೆ’ ಎಂದು ದೂರಲಾಗಿದೆ.

2017ರ ಡಿಸೆಂಬರ್‌ 31ರಂದು ಪುಣೆಯಲ್ಲಿ ಎಲ್ಗಾರ್‌ ಪರಿಷತ್ ಸಭೆ ನಡೆದಿತ್ತು. ಅದರ ಪರಿಣಾಮವಾಗಿ ಮರುದಿನ ಕೋರೆಗಾಂವ್‌–ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಭುಗಿಲೆದ್ದಿತ್ತು ಎಂದು ಪೊಲೀಸರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.