ಮುಂಬೈ: ಎಲ್ಗರ್ ಪರಿಷತ್ – ಮಾವೊವಾದಿ ಸಂಪರ್ಕ ಪ್ರಕರಣದಲ್ಲಿ ಆರೋಪಿಯಾಗಿರುವ ಪಾದ್ರಿ ಮತ್ತು ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಪಾರ್ಕಿನ್ಸನ್ ಕಾಯಿಲೆ ಮತ್ತು ಇತರ ಹಲವಾರು ಕಾಯಿಲೆಗಳಿಂದ ಬಳಲುತ್ತಿರುವ ಸ್ವಾಮಿ (84) ಅವರನ್ನು ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ ಮುಂಬೈನ ತಾಲೋಜ ಜೈಲಿನಿಂದ ಮೇ 28 ರಂದು ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.ಭಾನುವಾರ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತು ಎಂದು ಸ್ವಾಮಿ ಪರ ವೀಕೀಲ ಮಿಹಿರ್ ದೇಸಾಯಿ ತಿಳಿಸಿದ್ದಾರೆ.
ತಾಲೋಜ ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೈದಿಗಳಿಗೆ ಸಂಪರ್ಕವಾಗಿ ಆರೈಕೆ ಮಾಡುತ್ತಿಲ್ಲ. ರೋಗಿಗಳಿಗೆ ಸಕಾಲದಲ್ಲಿ ಸರಿಯಾಗಿ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ಮಾಡುತ್ತಿಲ್ಲ ಎಂದು ಮಿಹಿರ್ ದೇಸಾಯಿ ಆರೋಪಿಸಿದ್ದರು.
ನಂತರ ಈ ಪ್ರಕರಣದ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ದೇಸಾಯಿ ಒತ್ತಾಯಿಸಿದ್ದರು. ಈ ಬೆಳವಣಿಗೆ ನಂತರ ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್.ಆರ್.ಬೋರ್ಕರ್ ಅವರನ್ನೊಳಗೊಂಡ ಬಾಂಬೆ ಹೈಕೋರ್ಟ್ ಪೀಠ ಮೇ 28ರಂದು ಸ್ವಾಮಿ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.