ನವದೆಹಲಿ (ಪಿಟಿಐ): ‘ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿನ ಕೆಲ ಪಾಠಗಳಿಗೆ ಕತ್ತರಿ ಪ್ರಯೋಗ ಮಾಡಿರುವುದು ಸ್ವೇಚ್ಛೆಯ ಹಾಗೂ ತರ್ಕರಹಿತ ಕ್ರಮ’ ಎಂದು ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳ ಮುಖ್ಯ ಸಲಹೆಗಾರರಾಗಿರುವ ಸುಹಾಸ್ ಪಲಶೀಕರ್ ಹಾಗೂ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಅಲ್ಲದೇ, ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಮುಖ್ಯ ಸಲಹೆಗಾರರು ಎಂದು ನಮೂದಿಸಲಾಗಿರುವ ತಮ್ಮ ಹೆಸರುಗಳನ್ನು ಕೈಬಿಡಬೇಕು ಎಂದೂ ಅವರು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿಗೆ (ಎನ್‌ಸಿಇಆರ್‌ಟಿ) ಮನವಿ ಮಾಡಿದ್ದಾರೆ.
‘ಪಠ್ಯಪುಸ್ತಕಗಳನ್ನು ತರ್ಕಬದ್ಧಗೊಳಿಸುವ ಭಾಗವಾಗಿ ಮಾಡಿರುವ ಕ್ರಮದಿಂದಾಗಿ ನಮಗೆ ಮುಜುಗರವಾಗಿದೆ. ಈ ಕ್ರಮ ಪಠ್ಯಪುಸ್ತಕಗಳನ್ನು ಉಪಯೋಗಕ್ಕೆ ಬಾರದಂತೆ ಮಾಡಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಪಠ್ಯಪುಸ್ತಕಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ಮಾಡಲಾಗಿರುವ ಬದಲಾವಣೆಗಳನ್ನು ಸಮರ್ಥಿಸಿಕೊಳ್ಳಲಾಗಿದೆ. ಆದರೆ, ಈ ಕಾರ್ಯದ ಹಿಂದೆ ಶಿಕ್ಷಣಕ್ಕೆ ಸಂಬಂಧಿಸಿ ಯಾವುದೇ ತರ್ಕ ಕಾಣುತ್ತಿಲ್ಲ. ಗುರುತಿಸಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಪಠ್ಯವನ್ನು ವಿರೂಪಗೊಳಿಸಲಾಗಿದೆ’ ಎಂದು ಅವರು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶ ಸಕ್ಲಾನಿ ಅವರಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
‘ಈ ಬದಲಾವಣೆಗಳನ್ನು ಮಾಡುವಾಗ ನಮ್ಮೊಂದಿಗೆ ಸಮಾಲೋಚನೆ ನಡೆಸಿಲ್ಲ. ಈ ಬದಲಾವಣೆಗಳ ಬಗ್ಗೆಯೂ ಮಾಹಿತಿ ನೀಡಿಲ್ಲ. ಇತರ ತಜ್ಞರೊಂದಿಗೆ ಪಠ್ಯ ಬದಲಾವಣೆ ಕುರಿತು ಸಮಾಲೋಚನೆ ನಡೆಸಿದ್ದರೂ ಅದಕ್ಕೆ ನಮ್ಮ ಸಹಮತ ಇಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇವೆ’ ಎಂದು ಹೇಳಿದ್ದಾರೆ.
ಪಲಶೀಕರ್ ಅವರು ಶಿಕ್ಷಣ ತಜ್ಞ ಹಾಗೂ ರಾಜಕೀಯ ವಿಜ್ಞಾನಿ. ರಾಜಕೀಯ ವಿಜ್ಞಾನಿಯೂ ಆಗಿರುವ ಯೋಗೇಂದ್ರ ಯಾದವ್ ಸ್ವರಾಜ್ ಇಂಡಿಯಾದ ಮುಖಂಡ. ಇವರು, 2006–07ರಲ್ಲಿ ಪ್ರಕಟಗೊಂಡಿದ್ದ 9ರಿಂದ 12ನೇ ತರಗತಿ ವರೆಗಿನ ರಾಜಕೀಯವಿಜ್ಞಾನ ಮೂಲ ಪಠ್ಯಪುಸ್ತಕಗಳ ಮುಖ್ಯ ಸಲಹೆಗಾರರಾಗಿದ್ದರು.
2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಪ್ರಕಾರ ಈ ಪಠ್ಯಪುಸ್ತಕಗಳನ್ನು ಪ್ರಕಟಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.