ADVERTISEMENT

ಕಾಶ್ಮೀರಿ ಪಂಡಿತನ ಹತ್ಯೆ:ಸರ್ಕಾರದ ವಿರುದ್ಧ ಆಕ್ರೋಶ

ಪಿಟಿಐ
Published 16 ಅಕ್ಟೋಬರ್ 2022, 15:09 IST
Last Updated 16 ಅಕ್ಟೋಬರ್ 2022, 15:09 IST
ಹತ್ಯೆಗೀಡಾದ ಕ್ರಿಶನ್ ಭಟ್ ಪಾರ್ಥಿವ ಶರೀರದ ಎದುರು ಕುಟುಂಬಸ್ಥರ ಆಕ್ರಂದನ –ಪಿಟಿಐ ಚಿತ್ರ
ಹತ್ಯೆಗೀಡಾದ ಕ್ರಿಶನ್ ಭಟ್ ಪಾರ್ಥಿವ ಶರೀರದ ಎದುರು ಕುಟುಂಬಸ್ಥರ ಆಕ್ರಂದನ –ಪಿಟಿಐ ಚಿತ್ರ   

ಜಮ್ಮು:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರಿಂದ ಹತ್ಯೆಗೀಡಾದ ಕಾಶ್ಮೀರಿ ಪಂಡಿತ ಪುರನ್ ಕ್ರಿಶನ್ ಭಟ್ ಅವರ ಅಂತ್ಯಸಂಸ್ಕಾರ ಭಾನುವಾರ ನೆರವೇರಿತು. ಈ ಮಧ್ಯೆ ಕಾಶ್ಮೀರ ಪಂಡಿತರ ಸರಣಿ ಹತ್ಯೆಯನ್ನು ತಡೆಯುವಲ್ಲಿ ವಿಫಲವಾದ ಸರ್ಕಾರದ ವಿರುದ್ಧ ದುಃಖಿತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಪುರನ್ ಕ್ರಿಶನ್ ಭಟ್ ಹಣ್ಣಿನ ತೋಟಕ್ಕೆ ಹೋಗುತ್ತಿದ್ದಾಗದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದಲ್ಲಿ ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಪಾರ್ಥಿವ ಶರೀರವನ್ನು ಶನಿವಾರ ತಡರಾತ್ರಿ ಜಮ್ಮುವಿನ ಅವರ ಮುತಿ ನಿವಾಸದಲ್ಲಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು.

ಅಂತ್ಯಸಂಸ್ಕಾರದ ವೇಳೆ ಸಾವಿರಾರು ಜನರು ಪಾಲ್ಗೊಂಡಿದ್ದು, ಪಾಕಿಸ್ತಾನ ವಿರೋಧಿ ಘೋಷಣೆಯೊಂದಿಗೆ ಇಲ್ಲಿನ ಬಾನ್‌ ತಲಾಬ್‌ ಚಿತಾಗಾರದಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಸಲಾಯಿತು.

ADVERTISEMENT

ಇದೇ ವೇಳೆ, ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ಮತ್ತು ₹50 ಲಕ್ಷ ಪರಿಹಾರ ನೀಡುವಂತೆ ನೆರೆದ ಜನರು, ಸಂಬಂಧಿಕರು ಸರ್ಕಾರವನ್ನು ಆಗ್ರಹಿಸಿದರು. ಪರಿಸ್ಥಿತಿ ಸುಧಾರಿಸುವವರೆಗೂ ಕಾಶ್ಮೀರಿ ಪಂಡಿತರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು.

‘ಇನ್ನೊಬ್ಬ ಕಾಶ್ಮೀರಿ ಪಂಡಿತ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಮೂಲಕ ಕಣಿವೆಯಲ್ಲಿ ಭದ್ರತೆ ಸುಧಾರಿಸಿದೆ ಎನ್ನುವ ಸರ್ಕಾರದ ಮಾತು ಸುಳ್ಳು ಎನ್ನುವುದು ಬಹಿರಂಗವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರಿ ಪಂಡಿತ ಸಮುದಾಯದ 18 ಜನರ ಹತ್ಯೆಯಾಗಿದೆ. ಕಣಿವೆಯಲ್ಲಿ ಭದ್ರತಾ ಪರಿಸ್ಥಿತಿಯು 1990ರ ದಶಕದ ಆರಂಭಕ್ಕೆ ಹಿಂತಿರುಗಿದೆ’ ಎಂದು ಮೃತರ ಸಂಬಂಧಿಕರೊಬ್ಬರು ಆಕ್ರೋಶ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.