ಚೆನ್ನೈ: ಮಧುರೈನಲ್ಲಿ ನಿರ್ಮಾಣ ಮಾಡಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ದೇಗುಲವನ್ನು ಶನಿವಾರ ಮುಖ್ಯಮಂತ್ರಿ ಎ. ಪಳನಿಸ್ವಾಮಿಉದ್ಘಾಟಿಸಲಿದ್ದಾರೆ.
ತಮ್ಮನ್ನು ಮೊದಲ ಬಾರಿಗೆ ಕ್ಯಾಬಿನೆಟ್ ಗೆ ಸೇರಿಸಿಕೊಂಡಿದ್ದ ಜಯಲಲಿತಾ ಅವರ ದೇಗುಲ ನಿರ್ಮಾಣ ಹೊಣೆಯನ್ನು ಕಂದಾಯ ಸಚಿವ ಉದಯ್ ಕುಮಾರ್ ಹೊತ್ತಿದ್ದರು. ಮಧುರೈನಕಲ್ಲುಪಟ್ಟಿ ಪ್ರದೇಶದ ಒಂದೂವರೆ ಎಕರೆ ಜಾಗದಲ್ಲಿ ದೇಗುಲ ನಿರ್ಮಾಣವಾಗಿದ್ದು, ಜಯಲಲಿತಾ ಮತ್ತು ಎಂ.ಜಿ. ರಾಮಚಂದ್ರನ್ ಅವರ ಕಂಚಿನ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ.ದೇವಾಲಯಕ್ಕೆ ₹ 50 ಲಕ್ಷ ವ್ಯಯಿಸಲಾಗಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವು ತಿಂಗಳು ಬಾಕಿ ಉಳಿದಿದ್ದು, ಅಣ್ಣಾಡಿಎಂಕೆಯ ಪ್ರಮುಖ ನಾಯಕರ ದೇಗುಲ ಉದ್ಘಾಟನೆ ಮಹತ್ವ ಪಡೆದುಕೊಂಡಿದೆ.
ನಮ್ಮ ಅಮ್ಮ(ಜಯಲಲಿತಾ)ನನ್ನು ನಾವು ದೇವತೆ ಎಂದು ಕರೆಯುತ್ತೇವೆ. ಇಲ್ಲಿ ನಮ್ಮ ಅಮ್ಮನನ್ನು ಪೂಜಿಸಲು ಬರುವ ಜನರಿಗೆ ಸಾಕಷ್ಟು ಸ್ಥಳಾವಕಾಶ ಇದೆ ಎಂದು ಸಚಿವ ಉದಯ್ ಕುಮಾರ್ ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಅಣ್ಣಾಡಿಎಂಕೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜಯಲಲಿತಾ ಪರಂಪರೆಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
₹ 79 ಕೋಟಿ ವೆಚ್ಚದಲ್ಲಿಚೆನ್ನೈನಪೋಯಸ್ ಗಾರ್ಡನ್ ಪ್ರದೇಶದ ಜಯಲಲಿತಾ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸಲಾಗಿದ್ದು, ಇದೇ ವಾರದ ಆರಂಭದಲ್ಲಿ ಸಿಎಂ ಪಳನಿಸ್ವಾಮಿ ಉದ್ಘಾಟನೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.