ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಂದು (ಭಾನುವಾರ) ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿಶ್ತ್ವಾರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್ ನಡೆಸಲಾಗಿದ್ದು, ಉಗ್ರರನ್ನು ಮಟ್ಟ ಹಾಕಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ‘ಪಿಟಿಐ’ ವರದಿ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೊಕರ್‌ನಾಗ್ ಅರಣ್ಯ ಪ್ರದೇಶದಲ್ಲಿ ಶನಿವಾರ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರು ಸೇರಿದಂತೆ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಮೂವರು ಯೋಧರು ಮತ್ತು ನಾಗರಿಕರೊಬ್ಬರು ಗಾಯಗೊಂಡಿದ್ದರು.
‘ಡೋಡಾ ಪ್ರದೇಶದ ಕೊಕರ್‌ನಾಗ್‌ನ ಅಹ್ಲನ್ ಅರಣ್ಯದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿ ಪೊಲೀಸ್ ಮತ್ತು ಸೇನೆಯಿಂದ ಜಂಟಿ ಶೋಧ ಕಾರ್ಯಾಚರಣೆಕೈಗೊಳ್ಳಲಾಗಿತ್ತು. ಜಂಟಿ ಪಡೆಗಳು ಶಂಕಿತ ಅಡಗುತಾಣವನ್ನು ಸಮೀಪಿಸುತ್ತಿದ್ದಂತೆ, ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಐವರು ಯೋಧರು ಮತ್ತು ಇಬ್ಬರು ನಾಗರಿಕರು ಗಾಯಗೊಂಡರು. ಗಾಯಾಳುಗಳನ್ನು ದುರ್ಗಮ ಹಾದಿಯಲ್ಲಿ ಪ್ರಯಾಸದಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಇಬ್ಬರು ಯೋಧರು ಹುತಾತ್ಮರಾದರು’ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದರು.
‘ಇಲ್ಲಿ ಹೆಚ್ಚುವರಿ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ. ಕಡಿದಾದ ಭೂಪ್ರದೇಶ, ರಸ್ತೆ ಸಂಪರ್ಕದ ಕೊರತೆ ಮತ್ತು ಮೊಬೈಲ್ ನೆಟ್‌ವರ್ಕ್‌ಗಳ ಸಮಸ್ಯೆಯು ಉಗ್ರರ ವಿರುದ್ಧದ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿವೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.