ADVERTISEMENT

ಕಿರಿಕಿರಿ ಕರೆ ತಪ್ಪಿಸಲು ಟ್ರಾಯ್‌ ಕ್ರಮ: ನಿಯಮ ಉಲ್ಲಂಘಿಸಿದರೆ ₹1ಲಕ್ಷದವರೆಗೂ ದಂಡ

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 19:30 IST
Last Updated 19 ಜುಲೈ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅನಪೇಕ್ಷಿತ ದೂರವಾಣಿ ಕರೆ ಮತ್ತು ಸಂದೇಶಗಳಿಂದ ಗ್ರಾಹಕರಿಗೆ ಆಗುವ ಕಿರಿಕಿರಿ ಕೊನೆಗಾಣಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಈಗಾಗಲೇ ಜಾರಿಯಲ್ಲಿರುವ ನಿಯಮಗಳಿಗೆ ಗುರುವಾರ ಮತ್ತಷ್ಟು ಬದಲಾವಣೆಗಳನ್ನು ತಂದಿದೆ.

ಇನ್ನು ಟೆಲಿ ಮಾರ್ಕೆಟ್‌ಗೆ ಸಂಬಂಧಿಸಿದ ಸಂದೇಶ ಕಳುಹಿಸಲು ಮತ್ತು ಕರೆಗಳನ್ನು ಮಾಡಲು ಭವಿಷ್ಯದ ಚಂದದಾರರ ಒಪ್ಪಿಗೆ ಪಡೆಯವುದು ಕಡ್ಡಾಯವಾಗಲಿದೆ. ನಿಯಮಗಳನ್ನು ಉಲ್ಲಂಘಿಸಿದರೆ ಅಪರಾಧಗಳ ವಿಧಗಳನ್ನು ಆಧರಿಸಿ ₹1,000ದಿಂದ ₹1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಟ್ರಾಯ್‌ ಹೇಳಿದೆ.

‘ಹೊಸ ನಿಯಮವು ಸಂದೇಶ ಮತ್ತು ಕರೆ ಸ್ವೀಕಾರ ಒಪ್ಪಿಗೆ ನೀಡುವುದು ಹಾಗೂ ಈಗಾಗಲೇ ನೀಡಿದ್ದ ಒಪ್ಪಿಗೆ ವಾಪಸ್‌ ಪಡೆಯುವ ಸಂಪೂರ್ಣ ನಿಯಂತ್ರಣವನ್ನು ಚಂದಾದಾರರಿಗೆ ಒದಗಿಸಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಸಂದೇಶ ಕಳುಹಿಸುವವರ ಮತ್ತು ಚಂದದಾರರ ಒಪ್ಪಿಗೆ ನೋಂದಣಿ ಮಾಡಿಸಲು ಹೊಸ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಸಂದೇಶ ಕಳುಹಿಸುವ ನೋಂದಾಯಿತರ ಮೂಲಕ ವಾಣಿಜ್ಯ ಸಂವಹನ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕಣ್ಗಾವಲಿಡುವಂತೆಯೂ ದೂರಸಂಪರ್ಕ ಸೇವಾದಾತರಿಗೆ ಟ್ರಾಯ್‌ ನಿರ್ದೇಶನ ನೀಡಿದೆ.

ವಹಿವಾಟು ಪ್ರಚಾರಕ್ಕಾಗಿ ಎಸ್‌ಎಂಎಸ್‌ ಮತ್ತು ಧ್ವನಿ ಆಧಾರಿತ ಸಂವಹನವನ್ನು ಉದ್ದೇಶಪೂರ್ವಕವಾಗಿ ಮಿಶ್ರಣಗೊಳಿಸುವುದನ್ನು ತಡೆಯಲು ಟ್ರಾಯ್‌, ನೋಂದಾಯಿತ ಟೆಂಪ್ಲೆಟ್ಸ್‌ ಪರಿಕಲ್ಪನೆಯನ್ನು ಪರಿಚಯಿಸಿದೆ.

ವಾಣಿಜ್ಯ ಸಂವಹನಕ್ಕೆ ಸಂಬಂಧಿಸಿದಂತೆ ಒಪ್ಪಿಗೆಯನ್ನು (ಅಥವಾ ಅದನ್ನು ಹಿಂಪಡೆಯುವುದು) ದಾಖಲಿಸುವ ಸೌಲಭ್ಯವನ್ನು ಪ್ರತಿಯೊಂದು ದೂರಸಂಪರ್ಕ ಸೇವಾದಾತ ಕಂಪನಿಗಳು ಗ್ರಾಹಕರಿಗೆ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಟ್ರಾಯ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.