ADVERTISEMENT

ಭಯೋತ್ಪಾದನೆ ಕೊನೆಗಾಣಿಸಲು ಪಣ

ಪುಲ್ವಾಮಾ ದಾಳಿ ಪ್ರಸ್ತಾಪಿಸದೇ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸೌದಿ ರಾಜಕುಮಾರ ಬೆಂಬಲ

ಏಜೆನ್ಸೀಸ್
Published 20 ಫೆಬ್ರುವರಿ 2019, 20:24 IST
Last Updated 20 ಫೆಬ್ರುವರಿ 2019, 20:24 IST
ವಿಮಾನ ನಿಲ್ದಾಣದಲ್ಲಿ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಅಪ್ಪಿಕೊಂಡ ಪ್ರಧಾನಿ ನರೇಂದ್ರ ಮೋದಿ  –ರಾಯಿಟರ್ಸ್ ಚಿತ್ರ
ವಿಮಾನ ನಿಲ್ದಾಣದಲ್ಲಿ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಅಪ್ಪಿಕೊಂಡ ಪ್ರಧಾನಿ ನರೇಂದ್ರ ಮೋದಿ  –ರಾಯಿಟರ್ಸ್ ಚಿತ್ರ   

ನವದೆಹಲಿ: ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಸೌದಿ ಅರೇಬಿಯಾ ಬೆಂಬಲದ ಭರವಸೆ ನೀಡಿದೆ.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ದೇಶಗಳ ಮೇಲೆ ಜಾಗತಿಕ ಮಟ್ಟದಲ್ಲಿ ಒತ್ತಡ ಹೇರಲು ಉಭಯ ರಾಷ್ಟ್ರಗಳು ಬುಧವಾರ ಪ್ರತಿಜ್ಞೆ ಮಾಡಿವೆ.

ಪುಲ್ವಾಮಾ ಉಗ್ರರ ದಾಳಿಯ ಬೆನ್ನಲ್ಲೇ ಭಾರತಕ್ಕೆ ಭೇಟಿ ನೀಡಿರುವ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಜೊತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ವಿಚಾರಗಳು ಚರ್ಚೆಗೆ ಬಂದವು.

ADVERTISEMENT

ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ ಸಲ್ಮಾನ್ ಅವರು, ಪುಲ್ವಾಮಾ ದಾಳಿ ಬಗ್ಗೆ ಎಲ್ಲಿಯೂ ಪ್ರಸ್ತಾಪ ಮಾಡಲಿಲ್ಲ.

ಪ್ರಧಾನಿ ನರೇಂದ್ರ ಮೋದಿ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ದಾಳಿಗಳಲ್ಲಿ ಇರಾನ್‌ ಪಾತ್ರವಿದೆ ಎಂದು ಆರೋಪಿಸಿದರು.

ಪಾಕ್‌ಗೆ ಪ್ರಧಾನಿ ಎಚ್ಚರಿಕೆ: ನಿರ್ದಿಷ್ಟವಾಗಿ ಯಾವ ದೇಶದ ಹೆಸರನ್ನು ಪ್ರಸ್ತಾಪಿಸದೆ ಮೋದಿ ಅವರು, ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

‘ಇಂತಹ ವಿಧ್ವಂಸಕ ಕೃತ್ಯಗಳನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾದರೆ, ಯಾವುದೇ ರೂಪದಲ್ಲಿ ಭಯೋತ್ಪಾದನೆಗೆ ಸಹಕಾರ ನೀಡುತ್ತಿರುವ ದೇಶಗಳ ಮೇಲೆ ಒತ್ತಡ ಹೇರುವ ನಿರ್ಧಾರಕ್ಕೆ ಉಭಯ ದೇಶಗಳು ಬಂದಿವೆ’ ಎಂದು ಹೇಳಿದರು.

ಭಯೋತ್ಪಾದಕರ ಸಾಂಸ್ಥಿಕ ರಚನೆ
ಗಳು, ಅವರ ಮೂಲಸೌಕರ್ಯಗಳನ್ನು
ನಿರ್ನಾಮ ಮಾಡುವುದು ಮುಖ್ಯ. ಉಗ್ರರು ಮತ್ತು ಅವರ ಅನುಯಾಯಿಗಳಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವುದು ಅತಿಮುಖ್ಯ ಎಂದರು.

ಇತ್ಯರ್ಥವಾಗದೆ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕೆ ಮಾತುಕತೆಯೊಂದೇ ಪರಿಹಾರ ಎಂದು ಪಾಕಿಸ್ತಾನದ ಭೇಟಿ ಮುಗಿಸಿ ಭಾರತಕ್ಕೆ ಬಂದಿರುವ ಸಲ್ಮಾನ್ ಅಭಿಪ್ರಾಯಪಟ್ಟರು.

ಸೋಮವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಲ್ಮಾನ್, ಅಲ್ಲಿ ₹1.5 ಲಕ್ಷ ಕೋಟಿ ಹೂಡಿಕೆ ಮಾಡುವ ಒಪ್ಪಂದ ಮಾಡಿಕೊಂಡಿದ್ದರು.

**

ಮೋದಿ ಖುದ್ದು ಸ್ವಾಗತ: ಕಾಂಗ್ರೆಸ್ ಕಿಡಿ
ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಗಲ್ಫ್ ದೇಶದ ನಾಯಕನೊಬ್ಬನಿಗೆ ಭಾರತ ಎಷ್ಟು ಪ್ರಾಮುಖ್ಯತೆ ನೀಡುತ್ತಿದೆ ಎಂಬ ಸಂದೇಶವನ್ನು ಸಾರಿದರು.

ಪ್ರಧಾನಿಯ ಈ ನಡೆಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ‘ಪಾಕಿಸ್ತಾನದ ಭಯೋತ್ಪಾದನಾ ಕೃತ್ಯಗಳನ್ನು ಹೊಗಳುವವರಿಗೆ ಅದ್ದೂರಿ ಸ್ವಾಗತ ನೀಡುವುದು ಸರಿಯೇ, ಪುಲ್ವಾಮಾ ಹುತಾತ್ಮರನ್ನು ಸ್ಮರಿಸಿಕೊಳ್ಳಲು ಇರುವ ವಿಧಾನ ಇದೇನಾ ಎಂದು ಪ್ರಶ್ನಿಸಿದೆ.

ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾ ಹೊರಡಿಸಿರುವ ಜಂಟಿ ಪ್ರಕಟಣೆಯನ್ನು ತಡೆಹಿಡಿಯುವಂತೆ ಸೌದಿ ಮೇಲೆ ಒತ್ತಡ ಹೇರಲು ಮೋದಿ ಅವರು ಧೈರ್ಯ ಪ್ರದರ್ಶಿಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ಅಜರ್ ಮಸೂದ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವಂತೆ ಭಾರತ ಒತ್ತಡ ಹೇರುತ್ತಿರುವ ಸಮಯದಲ್ಲೇ, ಈ ವಿಚಾರವನ್ನು ರಾಜಕೀಯಗೊಳಿಸದಿರಲು ಪಾಕ್–ಸೌದಿ ಒಪ್ಪಂದಕ್ಕೆ ಬಂದಿದ್ದವು.

ಐತಿಹಾಸಿಕ ಸಂಬಂಧ
ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ ಸಿಕ್ಕ ಬಳಿಕ ಮಾತನಾಡಿದ ಸ‌ಲ್ಮಾನ್, ಭಾರತ–ಸೌದಿ ಐತಿಹಾಸಿಕ ಸಂಬಂಧ ಹೊಂದಿದ್ದು, ಇದನ್ನು ಇನ್ನಷ್ಟು ಬಲಗೊಳಿಸುವ ಆಶಯ ವ್ಯಕ್ತಪಡಿಸಿದರು.

‘ಭಾರತ ಹಾಗೂ ಸೌದಿ ನಡುವಿನ ಸಂಬಂಧವು ನಮ್ಮ ಡಿಎನ್‌ಎನಲ್ಲೇ ಇದೆ. ಇದು ಇನ್ನಷ್ಟು ವಿಸ್ತರಿಸಬೇಕು. ಸೌದಿ ಅರೇಬಿಯಾದ ಅಭಿವೃದ್ಧಿಯ ಪಾಲುದಾರರಾಗಿರುವ ಲಕ್ಷಾಂತರ ಭಾರತೀಯರಿಗೆ ಧನ್ಯವಾದ’ ಎಂದು ಅವರು ಹೇಳಿದರು.

ರಿಲಯನ್ಸ್ ಜೊತೆ ಒಪ್ಪಂದ ನಿರೀಕ್ಷೆ
ಹೂಡಿಕೆ ಮಾಡಲು ರಿಲಯನ್ಸ್ ಇಂಡಿಸ್ಟ್ರೀಸ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ಸೌದಿ ಅರೇಬಿಯಾದ ತೈಲ ಸಂಸ್ಥೆ ಅಮಾರ್ಕೊದ ಸಿಇಒ ಅಮಿನ್ ನಾಸ್ಸಾರ್ ಹೇಳಿದ್ದಾರೆ. ಹೆಚ್ಚುವರಿ ಬಂಡವಾಳ ಹೂಡಿಕೆಗೆ ಇತರ ಕಂಪನಿಗಳ ಜೊತೆಗೂ ಮಾತುಕತೆ ಎದುರು ನೋಡುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

ಪ್ರಧಾನಿ ಅಮೇಠಿ ಭೇಟಿ ರದ್ದು
ಅಮೇಠಿ: ಪ್ರಧಾನಿ ನರೇಂದ್ರ ಮೋದಿ ಫೆಬ್ರುವರಿ 27ರಂದು ಉತ್ತರ ಪ್ರದೇಶದ ಅಮೇಠಿಗೆ ನೀಡಬೇಕಿದ್ದ ಭೇಟಿ ರದ್ದಾಗಿದೆ. ಅಮೇಠಿ ಕ್ಷೇತ್ರವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿನಿಧಿಸುತ್ತಿದ್ದಾರೆ.

**

ಉಗ್ರವಾದ ಹತ್ತಿಕ್ಕಲು ಪ್ರಬಲ ಕಾರ್ಯಯೋಜನೆ ರೂಪಿಸಿದಲ್ಲಿ, ಭಯೋತ್ಪಾದನೆಯ ಬಾಹುಗಳು ಯುವಕರನ್ನು ಬಲಿಪಡೆಯುವುದು ತಪ್ಪುತ್ತದೆ.
-ನರೇಂದ್ರ ಮೋದಿ, ಪ್ರಧಾನಿ

ಭಯೋತ್ಪಾದನೆಯು ಭಾರತ–ಸೌದಿಯನ್ನು ಸಮಾನವಾಗಿ ಆತಂಕಕ್ಕೀಡುಮಾಡಿದೆ. ಗುಪ್ತಚರ ಮಾಹಿತಿ ವಿನಿಮಯ ಸೇರಿದಂತೆ ಭಾರತಕ್ಕೆ ಎಲ್ಲ ನೆರವು ನೀಡುತ್ತೇವೆ.
-ಮಹಮ್ಮದ್ ಬಿನ್ ಸಲ್ಮಾನ್, ಸೌದಿ ರಾಜಕುಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.