ನವದೆಹಲಿ: ಪಂಚಕುಲ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸುಧೀರ್ ಪರ್ಮಾರ್ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಗುರುಗ್ರಾಮದಲ್ಲಿರುವ ಇ.ಡಿ. ಕಚೇರಿಯಲ್ಲಿ ವಿಚಾರಣೆ ನಡೆಸಿದ ಬಳಿಕ ಸುಧೀರ್ ಅವರನ್ನು ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆ ಅಡಿಯಲ್ಲಿ ಕಸ್ಟಡಿಗೆ ಪಡೆಯಲಾಗಿದೆ. ಅವರನ್ನು ಇಂದು ನ್ಯಾಯಾಲಯದೆದುರು ಹಾಜರುಪಡಿಸುವ ಸಾಧ್ಯತೆ ಇದೆ.
ಸುಧೀರ್ ಅವರನ್ನು ಮೂರನೇ ಬಾರಿಗೆ ವಿಚಾರಣೆಗೆ ಕರೆದಿದ್ದ ಇ.ಡಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಿಂದ ಅನುಮತಿ ಪಡೆದು ಬಂಧಿಸಿದೆ.
ಸುಧೀರ್ ಅವರ ಸೋದರಳಿಯ ಅಜಯ್ ಪರ್ಮಾರ್, 'M3M ಗ್ರೂಪ್' ರಿಯಲ್ ಎಸ್ಟೇಟ್ ಕಂಪನಿಯ ಪ್ರಚಾರಕರಾದ ಬಸಂತ್ ಬನ್ಸಾಲ್ ಮತ್ತು ಅವರ ಮಗ ಪಂಕಜ್ ಬನ್ಸಾಲ್ ಎಂಬುವವರನ್ನು ಹಾಗೂ ಮತ್ತೊಂದು ರಿಯಲ್ ಎಸ್ಟೇಟ್ ಕಂಪನಿ 'IREO ಗ್ರೂಪ್' ಮಾಲೀಕ, ವ್ಯವಸ್ಥಾಪಕ ನಿರ್ದೇಶಕ ಲಲಿತ್ ಗೋಯಲ್ ಎಂಬುವರನ್ನು ಇ.ಡಿ. ಇದೇ ಪ್ರಕರಣ ಸಂಬಂಧ ಈ ಹಿಂದೆ ಬಂಧಿಸಿತ್ತು.
ಆರೋಪಿಗಳಾದ ರೂಪ್ ಕುಮಾರ್ ಬನ್ಸಾಲ್, ಅವರ ಸಹೋದರ ಬಸಂತ್ ಬನ್ಸಾಲ್ ಮತ್ತು ಲಲಿತ್ ಗೋಯಲ್ ವಿರುದ್ಧ ತಮ್ಮ ನ್ಯಾಯಾಲಯದಲ್ಲಿ ಇ.ಡಿ ಹಾಗೂ ಸಿ.ಬಿ.ಐ ದಾಖಲಿಸಿದ್ದ ಹಲವು ಪ್ರಕರಣಗಳಲ್ಲಿ ಸುಧೀರ್ ಬನ್ಸಾಲ್ ಪಕ್ಷಪಾತ ಮಾಡಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಲಭಿಸಿತ್ತು ಎಂದು ಎಸಿಬಿ ಎಫ್‌ಐಆರ್‌ನಲ್ಲಿ ಇ.ಡಿ. ಹೇಳಿದೆ.
ಪಂಚಕುಲ ವಿಶೇಷ ನ್ಯಾಯಾಲಯದಿಂದ ನ್ಯಾಯಾಧೀಶರಾಗಿದ್ದ ಸುಧೀರ್ ಪರ್ಮಾರ್ ಎಸಿಬಿ ಪ್ರಕರಣ ಸಂಬಂಧ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಮಾನತು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.