ADVERTISEMENT

ಅಬಕಾರಿ ಹಗರಣ: ದೆಹಲಿ ಸಿಎಂ ಕೇಜ್ರಿವಾಲ್‌ಗೆ 4ನೇ ಬಾರಿ ಸಮನ್ಸ್ ನೀಡಿದ ಇ.ಡಿ

ಪಿಟಿಐ
Published 13 ಜನವರಿ 2024, 4:40 IST
Last Updated 13 ಜನವರಿ 2024, 4:40 IST
<div class="paragraphs"><p>ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್</p></div>

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

   

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಜೊತೆ ನಂಟು ಹೊಂದಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನಾಲ್ಕನೇ ಬಾರಿ ಸಮನ್ಸ್‌ ನೀಡಿದೆ.

ಇದೇ 18ರಂದು ದೆಹಲಿಯ ಇ.ಡಿ ಮುಖ್ಯ ಕಚೇರಿಗೆ ಹಾಜರಾಗುವಂತೆ ಎಎಪಿ ಸಂಚಾಲಕರೂ ಆಗಿರುವ ಕೇಜ್ರಿವಾಲ್‌ ಅವರಿಗೆ ಶನಿವಾರ ನೀಡಿರುವ ಸಮನ್ಸ್‌ನಲ್ಲಿ ಸೂಚಿಸಲಾಗಿದೆ.

ADVERTISEMENT

ಈ ಹಿಂದೆ ಇ.ಡಿ ಮೂರು ಬಾರಿ ಸಮನ್ಸ್‌ ನೀಡಿದ್ದರೂ ಕೇಜ್ರಿವಾಲ್‌ ಅವರು ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು.  

ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯ (ಪಿಎಂಎಲ್‌ಎ) ಅಡಿ ಸಮನ್ಸ್ ನೀಡಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹಲವು ಬಾರಿ ಕೇಜ್ರಿವಾಲ್‌ ಅವರ ಹೆಸರು ಉಲ್ಲೇಖಿಸಲಾಗಿತ್ತು. 

ಇದೇ 19 ಮತ್ತು 20 ರಂದು ಗೋವಾದಲ್ಲಿ ನಡೆಯಲಿರುವ ಪಕ್ಷದ ಕಾರ್ಯಕರ್ತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಕೇಜ್ರಿವಾಲ್‌ ಅವರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಪಕ್ಷದ ಗೋವಾ ಘಟಕದ ಅಧ್ಯಕ್ಷ ಅಮಿತ್‌ ಪಾಲೇಕರ್‌ ಹೇಳಿದ್ದಾರೆ.

 ‘ಚುನಾವಣಾ ಪ್ರಚಾರದಿಂದ ದೂರವಿರಿಸಲು ಯತ್ನ’:

ಕೇಜ್ರಿವಾಲ್‌ ಅವರಿಗೆ ಇ.ಡಿ ಸಮನ್ಸ್‌ ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಪರಿಸರ ಸಚಿವ ಗೋಪಾಲ್‌ ರಾಯ್‌, ‘ಬಿಜೆಪಿಯು ಇ.ಡಿ ಯನ್ನು ದುರ್ಬಳಕೆ ಮಾಡಿಕೊಂಡು, ಕೇಜ್ರಿವಾಲ್‌ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸದಂತೆ ತಡೆಯಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಕೇಜ್ರಿವಾಲ್‌ ಅವರು ಜನವರಿ 18ರಿಂದ ಗೋವಾ ಪ್ರವಾಸಕ್ಕೆ ತೆರಳಲಿದ್ದು, ಅದಕ್ಕೂ ಮುನ್ನ ಸಮನ್ಸ್‌ ನೀಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕೇಜ್ರಿವಾಲ್‌ ಅವರಿಗೆ ಕಾನೂನು ಬಾಹಿರವಾಗಿ ನೋಟಿಸ್‌ ನೀಡುವುದನ್ನು ನಿಲ್ಲಿಸಿ ಎಂದೂ ಅವರು ಆಗ್ರಹಿಸಿದ್ದಾರೆ.

ಕೇಜ್ರಿವಾಲ್‌ ಅವರಿಗೆ ಸಮನ್ಸ್‌ ತಲುಪುವ ಮೊದಲೇ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು ಆರೋಪಿಸಿದ ಅವರು, ಇ.ಡಿಯು ಬಿಜೆಪಿಯ ರಾಜಕೀಯ ಅಸ್ತ್ರವಾಗುವುದನ್ನು ತಡೆಯಬೇಕು ಎಂದಿದ್ದಾರೆ.

ಕೇಜ್ರಿವಾಲ್‌ ಅವರು ವಿಚಾರಣೆಗೆ ಹಾಜರಾಗುತ್ತಾರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೋಪಾಲ್‌ ರಾಯ್‌, ಕೇಜ್ರಿವಾಲ್‌ ಅವರು ಕಾನೂನು ಸಲಹೆಗಾರರ ಜೊತೆ ಸಮಾಲೋಚನೆ ನಡೆಸಿ ಅವರ ನಿರ್ದೇಶನದಂತೆ ನಡೆದುಕೊಳ್ಳಲಿದ್ದಾರೆ’ ಎಂದು ಹೇಳಿದ್ದಾರೆ.

‘ತನಿಖೆಗೆ ರಾಜಕೀಯ ಬಣ್ಣ’

ಕೇಜ್ರಿವಾಲ್‌ ಅವರು ‘ತಲೆಮರೆಸಿಕೊಂಡವರ’ ಹಾಗೆ ವರ್ತಿಸುತ್ತಿದ್ದು, ಅವರ ಪಕ್ಷವು ಇ.ಡಿ ತನಿಖೆಗೆ ರಾಜಕೀಯ ಬಣ್ಣ ನೀಡುತ್ತಿದೆ ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.