ನವದೆಹಲಿ: ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಇರುವ ನಿರ್ಬಂಧಕ್ಕೆ ಲಿಂಗ ತಾರತಮ್ಯ ಕಾರಣ ಅಲ್ಲ ಎಂದು ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೇಳಿವೆ.
ಧಾರ್ಮಿಕ ವಿಚಾರದಲ್ಲಿ ನ್ಯಾಯಾಂಗವು ಹಸ್ತಕ್ಷೇಪ ಮಾಡಬಹುದೇ ಎಂಬ ಪ್ರಶ್ನೆಯನ್ನೂ ಎತ್ತಿವೆ. ದೇಗುಲಕ್ಕೆ ಮಹಿಳೆಯರ ಪ್ರವೇಶದ ನಿರ್ಬಂಧ ತೆರವುಗೊಳಿಸಿದ ತೀರ್ಪಿನ ಮರುಪರಿಶೀಲನೆ ವಿಚಾರನ್ನು ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಸಿದ ಬಳಿಕ ಈ ಪ್ರತಿಕ್ರಿಯೆ ಬಂದಿದೆ.
ಪರಂಪರೆ ಮತ್ತು ಆಚರಣೆಗೆ ಸಂಬಂಧಿಸಿದ ವಿಚಾರಗಳು ಧರ್ಮ ಮತ್ತು ನಂಬಿಕೆಯ ವ್ಯಾಪ್ತಿಗೆ ಬರುತ್ತವೆ ಎಂದು ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ್ ಕುಮಾರ್ ಹೇಳಿದ್ದಾರೆ. ಧರ್ಮದ ಆಚರಣೆಗೆ ಸಂಬಂಧಿಸಿದ ವಿಚಾರಗಳನ್ನು ಯಾವುದೇ ಸನ್ನಿವೇಶದಲ್ಲಾದರೂ ನ್ಯಾಯಾಂಗದ ಪರಿಶೀಲನೆಗೆ ಒಳಪಡಿಸುವುದು ಸಂವಿಧಾನವು ನೀಡಿರುವ ಪ್ರಾರ್ಥನೆಯ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತದೆ ಎಂಬುದು ಆರ್‌ಎಸ್‌ಎಸ್ ನಿಲುವು ಎಂದು ಅವರು ಹೇಳಿದ್ದಾರೆ.
ಅಯ್ಯಪ್ಪ ಸ್ವಾಮಿಯ ವೈಶಿಷ್ಟ್ಯದ ಕಾರಣದಿಂದಾಗಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿದೆ. ಇಂತಹ ವಿಚಾರಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರದ ಅಭಿಪ್ರಾಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಿದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ.
ವಿಶಿಷ್ಟ ದೇಗುಲವೊಂದರ ವಿಶಿಷ್ಟ ಪರಂಪರೆಯನ್ನು ಲಿಂಗ ತಾರತಮ್ಯ ಎಂದು ಕರೆಯಲಾಗದು. ಹಿಂದೂ ಧರ್ಮದಲ್ಲಿ ಲಿಂಗ ತಾರತಮ್ಯ ಇಲ್ಲ ಎಂದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದ್ದಾರೆ. ಧರ್ಮದ ಅಂತರ್ಗತ ವಿಚಾರದಲ್ಲಿ ನ್ಯಾಯಾಂಗವು ಹಸ್ತಕ್ಷೇಪ ನಡೆಸಬೇಕೇ ಎಂಬ ವಿಚಾರವನ್ನು ವಿಸ್ತೃತ ಪೀಠವು ಪರಿಶೀಲನೆಗೆ ಒಳಪಡಿಸಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ದೇವಾಲಯದ ಪರಂಪರೆಯ ಮೇಲೆ ಲಕ್ಷಾಂತರ ಮಹಿಳೆಯರು ವಿಶ್ವಾಸ ಇರಿಸಿದ್ದಾರೆ. ಹಾಗಾಗಿಯೇ ಈ ಪರಂಪರೆಯನ್ನು ರಕ್ಷಿಸಲು ಅವರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹಿಂದೂಗಳ ಧಾರ್ಮಿಕ ಹಕ್ಕುಗಳು ಮತ್ತು ಪವಿತ್ರ ಪರಂಪರೆಯನ್ನು ಗಮನದಲ್ಲಿ ಇರಿಸಿಕೊಂಡು ವಿಸ್ತೃತ ಪೀಠವು ತೀರ್ಪು ನೀಡಬಹುದು ಎಂಬ ಆಶಾವಾದವನ್ನು ಅವರು ವ್ಯಕ್ತಪಡಿಸಿದ್ದಾರೆ.
‘ಸುಪ್ರೀಂ ನಿರ್ಧಾರ ದುರುದೃಷ್ಟಕರ’
ನವದೆಹಲಿ (ಪಿಟಿಐ): ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶದ ವಿಚಾರವನ್ನು ವಿಸ್ತೃತ ಪೀಠಕ್ಕೆ ಒಪ್ಪಿಸಿರುವುದು ದುರದೃಷ್ಟಕರ ಮತ್ತು ಅನಗತ್ಯ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ.
ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟವಾದ ತೀರ್ಪು ನೀಡಿತ್ತು. ಆ ತೀರ್ಪನ್ನು ವಿಸ್ತೃತ ಪೀಠಕ್ಕೆ ನೀಡಿರುವುದು ದುರದೃಷ್ಟಕರ ಎಂದು ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಹೇಳಿದ್ದಾರೆ.
‘ಬೇರೆ ಅರ್ಜಿಗಳನ್ನು ಪರಿಶೀಲಿಸಲು ನ್ಯಾಯಾಲಯ ಬಯಸಿದ್ದರೆ ಅದನ್ನು ಮಾಡಬಹುದಿತ್ತು. ಆ ಅರ್ಜಿಗಳ ಜತೆಗೆ ಇದನ್ನು ತಳಕು ಹಾಕಿಕೊಳ್ಳುವ ಅಗತ್ಯ ಏನಿದೆ... ಈ ವಿಚಾರದಲ್ಲಿ ಈಗಾಗಲೇ ಬಹಳ ವಿಳಂಬ ಆಗಿದೆ. ಈಗ ಇನ್ನಷ್ಟು ವಿಳಂಬ ಆಗಲಿದೆ ಎಂಬುದು ದುರದೃಷ್ಟಕರ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ವಿಸ್ತೃತ ಪೀಠದ ತೀರ್ಪು ಪ್ರಕಟವಾಗುವವರೆಗೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಮುಕ್ತವಾಗಿರಬೇಕು. ಮಹಿಳೆಯರ ಪ್ರವೇಶಕ್ಕೆ ಯಾರೂ ಅಡ್ಡಿಪಡಿಸಬಾರದು. ಯಾವುದೇ ತಾರತಮ್ಯ ಇಲ್ಲ ಎಂಬುದು ಸುಳ್ಳು. ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ಅಲ್ಲಿ ಪ್ರವೇಶ ನೀಡಲಾಗುತ್ತಿಲ್ಲ. ಇದೇ ಶನಿವಾರ ನಾನು ಅಲ್ಲಿ ಹೋಗಿ ಪೂಜೆ ಮಾಡುತ್ತೇನೆ’ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ. ಕಳೆದ ನವೆಂಬರ್‌ನಲ್ಲಿಯೂ ದೇಗುಲ ಪ‍್ರವೇಶದ ವಿಫಲ ಪ್ರಯತ್ನವನ್ನು ಅವರು ನಡೆಸಿದ್ದರು.
‘ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸಾಮಾನ್ಯವಾಗಿ ತಿರಸ್ಕರಿಸುತ್ತದೆ... ಸೆಕ್ಷನ್ 377ರ ಅಡಿಯಲ್ಲಿನ ಮರುಪರಿಶೀಲನಾ ಅರ್ಜಿ ತಿರಸ್ಕೃತವಾಗಿದೆ. ಆದರೆ, ಶಬರಿಮಲೆ ತೀರ್ಪನ್ನು ವಿಸ್ತೃತ ಪೀಠಕ್ಕೆ ನೀಡಲಾಗಿದೆ. ತೀರ್ಪುಗಳು ಮತ್ತು ಮರುಪರಿಶೀಲನಾ ಅರ್ಜಿಗಳಿಗೆ ಸಂಬಂಧಿಸಿದ ತೀರ್ಮಾನಗಳ ಮೇಲೆಅಧಿಕಾರದಲ್ಲಿ ಇರುವವರನ್ನು ಸಂಪ್ರೀತಗೊಳಿಸುವ ವಿಚಾರಗಳು ಪ್ರಭಾವ ಬೀರುತ್ತಿವೆ ಎಂಬ ಭಾವನೆಯನ್ನು ಸುಪ್ರೀಂ ಕೋರ್ಟ್ ನಮಗೆ ನೀಡುತ್ತಿದೆ’ ಎಂದು ಮ ಹಿಳಾ ಹಕ್ಕುಗಳ ಕಾರ್ಯಕರ್ತೆ ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.
*
ವಿಪಕ್ಷಗಳು ಕಳೆದ ವರ್ಷ ಮಾಡಿದಂತೆ ಈ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಕಾನೂನು ತಜ್ಞರ ಜತೆ ಸಮಾಲೋಚಿಸಿ ಕ್ರಮದ ಬಗ್ಗೆ ನಿರ್ಧರಿಸಲಾಗುವುದು
–ಕಡಕಂಪಳ್ಳಿ ಸುರೇಂದ್ರನ್, ಕೇರಳದ ಮುಜರಾಯಿ ಸಚಿವ
*
ಮಹಿಳೆಯರು ದೇಗುಲ ಪ್ರವೇಶಿಸುವ ಪ್ರಯತ್ನಕ್ಕೆ ಪೊಲೀಸರು ನೆರವಾದರೆ ಪರಿಣಾಮ ಗಂಭೀರವಾಗಿರುತ್ತವೆ. ಇದು ಭಕ್ತರ ನಂಬಿಕೆಯನ್ನು ಬಾಧಿಸುವ ವಿಚಾರ.
–ಕುಮ್ಮನಂ ರಾಜಶೇಖರನ್ ,ಕೇರಳ ಬಿಜೆಪಿ ಮುಖಂಡ
*
ಯುವತಿಯರನ್ನು ದೇಗುಲಕ್ಕೆ ಕರೆದೊಯ್ದು ಅಲ್ಲಿ ಪೂಜೆ ಸಲ್ಲಿಸಲು ಸರ್ಕಾರವು ಅವಕಾಶ ನೀಡಬಾರದು. ಹೀಗೇ ಆದರೆ ಸರ್ಕಾರವೇ ಸಮಸ್ಯೆ ಸೃಷ್ಟಿಸಿದಂತೆ ಆಗುತ್ತದೆ.
–ರಮೇಶ್ ಚೆನ್ನಿತ್ತಲ, ಕಾಂಗ್ರೆಸ್ ಮುಖಂಡ
*
ಅಯೋಧ್ಯೆ ತೀರ್ಪನ್ನು ಸ್ವಾಗತಿಸಿದ ಸಂಘಪರಿವಾರವು ಇದನ್ನೂ ಸ್ವಾಗತಿಸಲಿದೆ. ಮಹಿಳೆಯರಿಗೆ ರಕ್ಷಣೆ ನೀಡಲು ಸರ್ಕಾರ, ಪೊಲೀಸ್ ಇಲಾಖೆ ಬದ್ಧವಾಗಿವೆ.
–ಬಿಂದು, ಸುಪ್ರೀಂ ಕೋರ್ಟ್ ತೀರ್ಪು ಬಳಿಕ ದೇಗುಲ ಪ್ರವೇಶಿಸಿದ್ದ ಮಹಿಳೆ
**
ಕೋರ್ಟ್ ಆದೇಶ.. ಭಕ್ತರ ಆಕ್ರೋಶ.. ಮಹಿಳೆಯರ ಪ್ರವೇಶ..
800 ವರ್ಷಗಳ ಸಂಪ್ರದಾಯ ಮುರಿದು, ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಿ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದ ತರುವಾಯ ಕೇರಳದಾದ್ಯಂತ ಭಾರಿ ಪ್ರತಿಭಟನೆಗಳು ನಡೆದಿದ್ದವು. ಕೋರ್ಟ್ ಆದೇಶದಂತೆ ಕೆಲವು ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಯತ್ನಿಸಿದರು. ಕೆಲವರು ಮಾತ್ರ ಯಶಸ್ವಿಯಾದರು. ತೀರ್ಪು ಪರಿಶೀಲನೆಗೆ ಮತ್ತೆ ಸುಪ್ರೀಂ ಕೋರ್ಟ್ ಮೋರೆ ಹೋಗಲಾಯಿತು. ಈ ಎಲ್ಲ ಬೆಳವಣಿಗೆಗಳ ಸಂಕ್ಷಿಪ್ತ ಪರಿಚಯ...
ಸೆ.28, 2018
ಎಲ್ಲ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು ಸುಪ್ರೀಂಕೋರ್ಟ್ ಅನುಮತಿ
ಅ.8:ತೀರ್ಪು ಮರುಪರಿಶೀಲಿಸಲು ಕೋರಿ ಅಯ್ಯಪ್ಪ ಭಕ್ತರ ಮಂಡಳಿಯಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ
ಅ.15:ಮಹಿಳೆಯರು ದೇಗುಲ ಪ್ರವೇಶಿಸಿದರೆ ಸಾಮೂಹಿಕ ಆತ್ಮಹತ್ಯೆ ಬೆದರಿಕೆ ಒಡ್ಡಿದ ಶಿವಸೇನಾ
ಅ.17:10–50 ವಯಸ್ಸಿನ ಮಹಿಳೆಯರು ದೇಗುಲ ಪ್ರವೇಶಿಸದಂತೆ ತಡೆಯಲು ಬೆಟ್ಟದ ಅಡಿಯಲ್ಲಿರುವ ನಿಲಕ್ಕಲ ಎಂಬಲ್ಲಿ ವಾಹನಗಳ ತಪಾಸಣೆ ನಡೆಸಲು ಬೀಡುಬಿಟ್ಟ ಭಕ್ತರ ತಂಡ
ಅ.19: ಸಾಮಾಜಿಕ ಕಾರ್ಯಕರ್ತೆ ರಿಹಾನಾ ಫಾತಿಮಾ, ಪತ್ರಕರ್ತೆ ಕವಿತಾ ಜಕ್ಕಲ್ ಅವರನ್ನು ಬಿಗಿ ಭದ್ರತೆಯಲ್ಲಿ ದೇವಸ್ಥಾನದತ್ತ ಕರೆದೊಯ್ದ ಪೊಲೀಸರು; ವಿಷಯ ತಿಳಿದು ದೇವಸ್ಥಾನದ ಬಾಗಿಲುಮುಚ್ಚಿದ ಅರ್ಚಕ. ಇಬ್ಬರೂ ಮಹಿಳೆಯರು ಅರ್ಧದಾರಿಯಲ್ಲೇ ವಾಪಸ್
ನ.14:ತೀರ್ಪಿಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಣೆ
ನ.17 :ದೇಗುಲು ಪ್ರವೇಶಿಸಲು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಭಕ್ತರ ತಡೆ; ನಿಲ್ದಾಣ ಬಿಟ್ಟು ಹೊರಬರಲು ಆಗದೇ ಪುಣೆಗೆ ವಾಪಸ್
ಡಿ.23:50 ವರ್ಷದೊಳಗಿನ 11 ಮಹಿಳೆಯರು ಬೆಟ್ಟ ಹತ್ತಲು ಯತ್ನ; ಅವಕಾಶ ನೀಡದ ಪ್ರತಿಭಟನಕಾರರು
ಜ.2, 2019
40 ವರ್ಷ ಆಸುಪಾಸಿನ ಕನಕದುರ್ಗಾ ಹಾಗೂ ಬಿಂದು ಎಂಬ ಕೇರಳದ ಇಬ್ಬರು ಮಹಿಳೆಯರಿಂದ ನಸುಕಿನ 3.45ರಲ್ಲಿ ಅಯ್ಯಪ್ಪ ದೇಗುಲ ದರ್ಶನ; ಅರ್ಚಕರಿಂದ ದೇಗುಲ ಶುದ್ಧೀಕರಣ
ಜ.15:ದೇಗುಲ ಪ್ರವೇಶಿಸಿದ್ದನ್ನು ಪ್ರಶ್ನಿಸಿ ತಮ್ಮ ಅತ್ತೆಯಿಂದ ಕನಕದುರ್ಗಾ ಮೇಲೆ ಹಲ್ಲೆ; ಮನೆಯಿಂದ ಹೊರಹಾಕಿದ ಕುಟುಂಬ
ಫೆ. 6:ಪನರ್ ಪರಿಶೀಲನಾ ಅರ್ಜಿಗಳ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ನ.14:ಏಳು ನ್ಯಾಯಾಧೀಶರ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.