ADVERTISEMENT

ಮಧ್ಯಂತರ ಜಾಮೀನು ಅವಧಿ ಮುಕ್ತಾಯ: ಸಂಸದ ಎಂಜಿನಿಯರ್‌ ರಶೀದ್ ಜೈಲಿಗೆ ಶರಣು

ಏಜೆನ್ಸೀಸ್
Published 28 ಅಕ್ಟೋಬರ್ 2024, 7:20 IST
Last Updated 28 ಅಕ್ಟೋಬರ್ 2024, 7:20 IST
ಎಂಜಿನಿಯರ್‌ ರಶೀದ್
ಎಂಜಿನಿಯರ್‌ ರಶೀದ್   

ನವದೆಹಲಿ: ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯ ಎಂಜಿನಿಯರ್ ರಶೀದ್ ಅವರಿಗೆ ನೀಡಿದ್ದ ಮಧ್ಯಂತರ ಜಾಮೀನು ಅವಧಿ ಇಂದಿಗೆ ಮುಕ್ತಾಯವಾಗಿದ್ದು ದೆಹಲಿಯ ತಿಹಾರ್‌ ಜೈಲಿಗೆ ಶರಣಾಗಿದ್ದಾರೆ.

ರಶೀದ್ ಅವರ ತಂದೆಯ ಆರೋಗ್ಯದ ಕಾರಣ ಮಧ್ಯಂತರ ಜಾಮೀನನ್ನು ಅ. 28 ರವರೆಗೆ ವಿಸ್ತರಿಸಲಾಗಿತ್ತು. ಈ ಹಿಂದೆ ಅ.2 ರವರೆಗೆ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಈ ಪ್ರಕರಣವು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲಿಸಿದ ಭಯೋತ್ಪಾದಕ ನಿಧಿ ಪ್ರಕರಣಕ್ಕೆ ಸಂಬಂಧಿಸಿದೆ.

‌ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧನಕ್ಕೊಳಗಾಗಿರುವ ಎಂಜಿನಿಯರ್, 2019ರಿಂದ ಜೈಲಿನಲ್ಲಿದ್ದಾರೆ. ರಶೀದ್‌ಗೆ ಈ ಹಿಂದೆ, ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯವು ಜುಲೈ 5ರಂದು ಪೆರೋಲ್ ನೀಡಿತ್ತು.

ADVERTISEMENT

ಅವಾಮಿ ಇತ್ತೆಹಾದ್‌ ಪಾರ್ಟಿಯ (ಎಐಪಿ) ಪ್ರಭಾವಿ ನಾಯಕರಾಗಿರುವ ರಶೀದ್‌ ಅವರು ಈಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿ, ಮಾಜಿ ಮುಖ್ಯಮಂತ್ರಿಯೂ ಆಗಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ನಾಯಕ ಒಮರ್‌ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು. ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸಾಧಿಸಿದ ಗೆಲುವು, ಅವರ ಪ್ರಭಾವ ಏನೆಂಬುದನ್ನು ತೋರಿಸಿಕೊಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.