ಹೈದರಾಬಾದ್: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (ಎನ್‌ಇಸಿ)ಗೆ ಹಾಜರಾಗಲು ಇಲ್ಲಿಗೆ ಬರುತ್ತಿರುವ ಪಕ್ಷದ ನಾಯಕರಿಗೆ ವಿಶ್ವವಿಖ್ಯಾತ ಹೈದರಾಬಾದ್ ದಮ್ ಬಿರಿಯಾನಿ ತಿನ್ನಲು ಮತ್ತು ಇರಾನಿ ಟೀಯನ್ನು ಕುಡಿಯಲು ಮರೆಯದಿರಿ ಎಂದು ತೆಲಂಗಾಣ ಸಚಿವ ಕೆ.ಟಿ. ರಾಮ ರಾವ್ ಟಾಂಗ್ ನೀಡಿದ್ದಾರೆ.
ಹೈದರಾಬಾದ್‌ನಲ್ಲಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆಯೋಜಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿರಲಿದ್ದಾರೆ.
'ಕಾರ್ಯಕಾರಿಣಿ ಸಭೆಗಾಗಿ ಸುಂದರ ನಗರ ಹೈದರಾಬಾದ್‌ಗೆ ಬರುತ್ತಿರುವ ವಾಟ್ಸಾಪ್ ವಿಶ್ವವಿದ್ಯಾಲಯಕ್ಕೆ ಸ್ವಾಗತ. ಎಲ್ಲ ಜುಮ್ಲಾ ಜೀವಿಗಳಲ್ಲಿ ಒಂದು ವಿನಂತಿ. ನಮ್ಮ ದಮ್ ಬಿರಿಯಾನಿ ಮತ್ತು ಇರಾನಿ ಟೀ ರುಚಿ ನೋಡಲು ಮರೆಯದಿರಿ' ಎಂದು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ರಾಮ ರಾವ್ ಟ್ವೀಟ್ ಮಾಡಿದ್ದಾರೆ.
ರಾಜ್ಯ ಸರ್ಕಾರವು ಜಾರಿಗೆ ತಂದ ಯೋಜನೆಗಳ ಕೆಲವು ಫೋಟೊಗಳನ್ನು ಹಂಚಿಕೊಂಡಿರುವ ರಾಮ ರಾವ್, ಈ ಸ್ಥಳಗಳಿಗೂ ಭೇಟಿ ನೀಡಿ ಎಂದು ಬಿಜೆಪಿ ನಾಯಕರಿಗೆ ಆಹ್ವಾನಿಸಿದ್ದಾರೆ. ಟಿ-ಹಬ್ 2.0, ಕಾಳೇಶ್ವರಮ್ ಯೋಜನೆ, ಪೊಲೀಸ್ ಕಮಾಂಡ್ ಕಂಟ್ರೋಲ್ ಕಟ್ಟಡ ಮತ್ತಿತರ ಸ್ಥಳದ ಫೋಟೊಗಳನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
'ಈ ಯೋಜನೆಗಳ ಬಗ್ಗೆ ಠಿಪ್ಪಣಿಗಳನ್ನು ಮಾಡಿಕೊಳ್ಳಿ, ತಮ್ಮ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತನ್ನಿ' ಎಂದು ಬಿಜೆಪಿ ನಾಯಕರನ್ನು ಮೂದಲಿಸಿದ್ದಾರೆ.
ಕೆಟಿಆರ್ ಶುಕ್ರವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ತೆಲಂಗಾಣದಿಂದ ಪಾಠ ಕಲಿಯಿರಿ. ಬನ್ನಿ, ನೋಡಿ ಮತ್ತು ಅನುಷ್ಠಾನಕ್ಕೆ ತನ್ನಿ. ತೆಲಂಗಾಣ ಮಾದರಿಯ ಅಭಿವೃದ್ಧಿ, ಕಾರ್ಯನೀತಿಗಳು, ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಯನ ಮಾಡಬೇಕು. ಡಬಲ್ ಇಂಜಿನ್ ಸರ್ಕಾರಗಳಿರುವ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಬಹುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.