ADVERTISEMENT

ಮಹಿಳೆಯರಿಗೆ ಕಾಯಂ ನಿಯೋಜನೆ ಹುದ್ದೆ: ಸುಪ್ರೀಂ ಕೋರ್ಟ್‌ ತಾಕೀತು

ಸರ್ಕಾರ ಮಾಡದಿದ್ದರೆ ಈ ಕೆಲಸ ನಾವೇ ಮಾಡುತ್ತೇವೆ – ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಪಿಟಿಐ
Published 26 ಫೆಬ್ರುವರಿ 2024, 15:42 IST
Last Updated 26 ಫೆಬ್ರುವರಿ 2024, 15:42 IST
<div class="paragraphs"><p> ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ಭಾರತೀಯ ಕರಾವಳಿ ಕಾವಲು ಪಡೆಯಲ್ಲಿ ಮಹಿಳೆಯರಿಗೆ ಕಾಯಂ ನಿಯೋಜನೆಯ ಹುದ್ದೆಗಳನ್ನು ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೋಮವಾರ ತಾಕೀತು ಮಾಡಿದೆ. ಈ ಕೆಲಸವನ್ನು ಸರ್ಕಾರ ಮಾಡದೆ ಇದ್ದಲ್ಲಿ, ತಾನೇ ಮಾಡುವುದಾಗಿ ಸ್ಪಷ್ಟ ಸಂದೇಶ ರವಾನಿಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ತ್ರಿಸದಸ್ಯ ಪೀಠವು ಈ ಮಾತು ಹೇಳಿದೆ. ಕೇಂದ್ರದ ಪರವಾಗಿ ಹಾಜರಿದ್ದ ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ‘ಅಲ್ಪಾವಧಿ ನಿಯೋಜನೆಯ ಹುದ್ದೆಗಳಲ್ಲಿ ಇರುವ ಅಧಿಕಾರಿಗಳಿಗೆ (ಎಸ್‌ಎಸ್‌ಸಿಒ) ಕಾಯಂ ನಿಯೋಜನೆಯ ಹುದ್ದೆಯನ್ನು ಕಲ್ಪಿಸುವಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಇವೆ’ ಎಂದು ವಿವರಿಸಿದರು.

ADVERTISEMENT

‘ಈ ವಾದಗಳಿಗೆಲ್ಲ 2024ನೆಯ ಇಸವಿಯಲ್ಲಿ ಅರ್ಥವಿಲ್ಲ. ಮಹಿಳೆಯರನ್ನು ಹೊರಗೆ ಇರಿಸಲು ಆಗದು. ನೀವು ಈ ಕೆಲಸ ಮಾಡದೆ ಇದ್ದರೆ, ನಾವೇ ಮಾಡುತ್ತೇವೆ. ಹೀಗಾಗಿ, ಈ ವಿಚಾರವಾಗಿ ಪರಿಶೀಲಿಸಿ’ ಎಂದು ಚಂದ್ರಚೂಡ್ ಅವರು ತಾಕೀತು ಮಾಡಿದರು.

ಈ ವಿಚಾರಗಳ ಬಗ್ಗೆ ಗಮನ ನೀಡಲು ಒಂದು ಮಂಡಳಿಯನ್ನು ರಚಿಸಲಾಗಿದೆ ಎಂದು ವೆಂಕಟರಮಣಿ ಅವರು ವಿವರಿಸಿದರು. ‘ನೀವು ಮಹಿಳೆಯರಿಗೂ ಅವಕಾಶ ಕಲ್ಪಿಸಬೇಕು’ ಎಂದು ಪೀಠವು ಸೂಚಿಸಿತು. ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಲಾಗಿದೆ.

ಮಹಿಳೆಯರನ್ನು ಸಮಾನವಾಗಿ ಕಾಣುವ ನೀತಿಯೊಂದನ್ನು ಕರಾವಳಿ ಕಾವಲು ಪಡೆಯು ರೂಪಿಸಬೇಕು ಎಂದು ಪೀಠವು ಈ ಹಿಂದೆ ಸೂಚಿಸಿತ್ತು. ಕರಾವಳಿ ಕಾವಲು ಪಡೆಯಲ್ಲಿ ಅಲ್ಪಾವಧಿ ನಿಯೋಜನೆಯ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವ, ಅರ್ಹ ಮಹಿಳೆಯರಿಗೆ ಕಾಯಂ ನಿಯೋಜನೆಯ ಹುದ್ದೆ ಕಲ್ಪಿಸಬೇಕು ಎಂದು ಕೋರಿ ಕರಾವಳಿ ಕಾವಲು ಪಡೆಯ ಅಧಿಕಾರಿ ಪ್ರಿಯಾಂಕಾ ತ್ಯಾಗಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ತ್ರಿಸದಸ್ಯ ಪೀಠವು ನಡೆಸುತ್ತಿದೆ.

‘ನೀವು ನಾರಿಶಕ್ತಿಯ ಬಗ್ಗೆ ಮಾತನಾಡುತ್ತೀರಿ. ಅದನ್ನು ಇಲ್ಲಿ ತೋರಿಸಿ...’ ಎಂದು ಪೀಠವು ಹಿಂದೆ ಹೇಳಿತ್ತು. ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಾಯಂ ನಿಯೋಜನೆ ಹುದ್ದೆಯನ್ನು ನೀಡುವ ವಿಚಾರವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರೂ, ಸರ್ಕಾರವು ಇಲ್ಲಿ ‘ಪುರುಷ ಪ್ರಾಧಾನ್ಯ ನಡೆಯನ್ನು ಅನುಸರಿಸುತ್ತಿದೆಯೇ’ ಎಂದು ಕೂಡ ಪೀಠವು ‍ಪ್ರಶ್ನಿಸಿತ್ತು.

ಕಾಯಂ ನಿಯೋಜನೆ ಹುದ್ದೆಗಳಲ್ಲಿ ಶೇಕಡ 10ರಷ್ಟನ್ನು ಮಹಿಳೆಯರಿಗೆ ಮೀಸಲಾಗಿ ಇರಿಸಬಹುದು ಎಂಬ ವಿವರಣೆಗೆ ಪ್ರತಿಯಾಗಿ ಪೀಠವು, ‘ಶೇ 10ರಷ್ಟು ಮಾತ್ರ ಏಕೆ? ಮಹಿಳೆಯರು ಕಡಿಮೆ ದರ್ಜೆಯವರೇ’ ಎಂದು ಖಾರವಾಗಿ ಪ್ರಶ್ನಿಸಿತ್ತು. ಭಾರತೀಯ ನೌಕಾಪಡೆಯು ಮಹಿಳೆಯರಿಗೆ ಕಾಯಂ ನಿಯೋಜನೆ ಹುದ್ದೆ ಕಲ್ಪಿಸಿರುವಾಗ ಕರಾವಳಿ ಕಾವಲು ಪಡೆ ಆ ಕೆಲಸವನ್ನು ಏಕೆ ಮಾಡುತ್ತಿಲ್ಲ ಎಂದು ಕೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.