ADVERTISEMENT

ಶುದ್ಧಗಾಳಿಗಾಗಿ ಯೋಜನೆ

ಕರ್ನಾಟಕದ 4 ನಗರ ಸೇರಿ 102 ನಗರಗಳಲ್ಲಿ ಮಾಲಿನ್ಯ ನಿಯಂತ್ರಣ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 20:00 IST
Last Updated 9 ಜುಲೈ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕರ್ನಾಟಕದ ನಾಲ್ಕು ನಗರಗಳೂ ಸೇರಿದಂತೆ ದೇಶದ ಒಟ್ಟು 102 ನಗರಗಳ ವಾಯುಮಾಲಿನ್ಯ ಪ್ರಮಾಣ ತಗ್ಗಿಸಲು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಶುದ್ಧಗಾಳಿ ಕಾರ್ಯಕ್ರಮ’ ಎಂಬ ವಿಶೇಷ ಯೋಜನೆ ಜಾರಿಗೊಳಿಸಲು ಮುಂದಾಗಿದೆ.

ಕರ್ನಾಟಕದಲ್ಲಿ ಬೆಂಗಳೂರು ನಗರವನ್ನು ಬಿಟ್ಟರೆ, ವಾಯುಮಾಲಿನ್ಯದ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ದಾವಣಗೆರೆ, ಕಲಬುರ್ಗಿ ಹಾಗೂ ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಈ ಯೋಜನೆ ಜಾರಿಯಾಗಲಿದೆ.

‘2018–19ನೇ ಸಾಲಿನ ಬಜೆಟ್‌ನಲ್ಲಿ ವಾಯುಮಾಲಿನ್ಯ ತಡೆಗಾಗಿ ₹ 2,683 ಕೋಟಿ ಮೀಸಲಿಡಲಾಗಿತ್ತು, 2019–20ನೇ ಸಾಲಿನಲ್ಲೀ ಈ ಉದ್ದೇಶಕ್ಕೆ ಮೀಸಲಿಟ್ಟ ಮೊತ್ತವನ್ನು ₹ 482 ಕೋಟಿಯಷ್ಟು ಹೆಚ್ಚಿಸಲಾಗಿದೆ (₹ 3175 ಕೋಟಿ). ಹೆಚ್ಚುವರಿಯಾಗಿ ನೀಡಿದ್ದ ಹಣದಲ್ಲಿ ದೊಡ್ಡ ಪಾಲನ್ನು ಗಾಳಿಯ ಶುದ್ಧೀಕರಣ ಕಾರ್ಯಕ್ರಮಗಳಿಗೆ ವಿನಿಯೋಗಿಸಲಾಗುವುದು. ರಸ್ತೆಗಳನ್ನು ವ್ಯಾಕ್ಯೂಮ್‌ ಮೂಲಕ ಶುಚಿಗೊಳಿಸುವ ಯಂತ್ರಗಳ ಖರೀದಿ ಹಾಗೂ ಪಾರ್ಟಿಕ್ಯುಲೇಟ್‌ ಮ್ಯಾಟರ್‌ 2.5 (ಪಿಎಂ 2.5) ಮಾಪನ ಯಂತ್ರಗಳ ಸ್ಥಾಪನೆಗೆ ವ್ಯಯಿಸಲಾಗುವುದು ಎಂದು ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದರು.

ADVERTISEMENT

‘ಆಯ್ಕೆ ಮಾಡಿರುವ 102ರಲ್ಲಿ 80 ನಗರಗಳ ಕ್ರಿಯಾ ಯೋಜನೆ ಸಿದ್ಧವಿದೆ. ಈ ನಗರಗಳಲ್ಲಿ ಯೋಜನೆಯನ್ನು ಶೀಘ್ರ ಜಾರಿಗೊಳಿಸಲಾಗುವುದು. ಉಳಿದ ನಗರಗಳ ಕ್ರಿಯಾಯೋಜನೆಗೆ ಅಂತಿಮ ರೂಪ ನೀಡಲಾಗುತ್ತಿದೆ.

2019ರ ಜನವರಿ ತಿಂಗಳಲ್ಲಿ ಅಂದಿನ ಪರಿಸರ ಖಾತೆ ಸಚಿವ ಹರ್ಷವರ್ಧನ್‌ ಅವರು ಮೊದಲಬಾರಿಗೆ ‘ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮ’ವನ್ನು ಘೋಷಿಸಿದ್ದರು. ಆದರೆ ಚುನಾವಣಾ ನೀತಿಸಂಹಿತೆ ಜಾರಿಯಾಗಿದ್ದರಿಂದ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಈಗ ಎರಡನೇ ಬಾರಿಗೆ ಅದಕ್ಕೆ ಚಾಲನೆ ನೀಡಲಾಗುತ್ತಿದೆ.

‘ಮುಂದಿನ ಎರಡು ವರ್ಷಗಳಲ್ಲಿ ಗಾಳಿಯಲ್ಲಿ ಪಿಎಂ 2.5 ಹಾಗೂ ಪಿಎಂ 10ರ ಪ್ರಮಾಣವನ್ನು ಶೇ 20ರಷ್ಟು ಹಾಗೂ 5 ವರ್ಷಗಳಲ್ಲಿ ಶೇ 30ರಷ್ಟು ಇಳಿಕೆ ಮಾಡುವುದು ಕಾರ್ಯಕ್ರಮದ ಗುರಿಯಾಗಿದೆ. ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯ ನಗರಗಳಿಗೆ ₹ 10 ಕೋಟಿ ವಿಶೇಷ ಅನುದಾನ ನೀಡಲಾಗುವುದು’ ಎಂದು ಪರಿಸರ ಇಲಾಖೆ ಕಾರ್ಯದರ್ಶಿ ಸಿ.ಕೆ. ಮಿಶ್ರಾ ತಿಳಿಸಿದರು. ಕರ್ನಾಟಕದಿಂದ ಆಯ್ಕೆಯಾಗಿರುವ ನಗರಗಳಲ್ಲಿ ಬೆಂಗಳೂರಿಗೆ ಮಾತ್ರ ಈ ವಿಶೇಷ ಅನುದಾನ ಲಭಿಸಲಿದೆ.

ಮುಖ್ಯ ಗುರಿ
* ಘನತ್ಯಾಜ್ಯ ವಿಲೇವಾರಿ
* ವಾಹನಗಳು, ಕೈಗಾರಿಕೆಗಳಿಂದ ಉಂಟಾಗುವ ಮಾಲಿನ್ಯದ ಮೇಲೆ ನಿಯಂತ್ರಣ
* ‌ದೂಳು ನಿರ್ವಹಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.