ಮುಂಬೈ: ಗಾಳಿಪಟ ಹಾರಿಸಲು ಚೀನಾದ ದಾರ (ಮಾಂಜ) ಎಂದು ಕರೆಯಲ್ಪಡುವ ನೈಲಾನ್ ದಾರದ ಬಳಕೆಯನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿದ್ದು, ಇದನ್ನು ಪರಿಸರವಾದಿಗಳು ಸ್ವಾಗತಿಸಿದ್ದಾರೆ.
ಪ್ಲಾಸ್ಟಿಕ್ ಅಥವಾ ಸಿಂಥೆಟಿಕ್ ವಸ್ತುಗಳಿಂದ ಮಾಡಲಾಗುವ ಚೈನೀಸ್ ಮಾಂಜ, ಚೈನೀಸ್ ದೋರ್ ಅಥವಾ ನೈಲಾನ್ ಅಥವಾ ಸಿಂಥೆಟಿಕ್ ಮಾಂಜದಿಂದ ಮನುಷ್ಯರು ಹಾಗೂ ಪಕ್ಷಿಗಳಲ್ಲಿ ಸಾಕಷ್ಟು ಸಾವು–ನೋವುಗಳು ಸಂಭವಿಸಿದೆ. ಅಷ್ಟೇ ಅಲ್ಲದೇ ಇದು ಭೂಮಿಯಲ್ಲಿ ಕರಗುವುದಿಲ್ಲ. ಒಳಚರಂಡಿ, ನದಿಗಳು, ತೊರೆಗಳು, ಜಲಾಶಯಗಳು ಮತ್ತು ಪ್ರಾಣಿಗಳಿಗೆ ಉಸಿರುಗಟ್ಟಿಸುವುದು ಸೇರಿದಂತೆ ಹಲವಾರು ರೀತಿಯಲ್ಲಿ ಪರಿಸರವನ್ನು ಹಾನಿಗೊಳಿಸುತ್ತದೆ ಎಂದು ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಚೈನೀಸ್ ಮಾಂಜಾ ಅಥವಾ ಚೈನೀಸ್ ಡೋರ್ ಎಂದು ಕರೆಯಲ್ಪಡುವ ದಾರಗಳು, ನುಣ್ಣಗೆ ಪುಡಿಮಾಡಿದ ಗಾಜು, ಲೋಹ ಅಥವಾ ಇತರ ಯಾವುದೇ ಚೂಪಾದ ವಸ್ತುಗಳನ್ನು ಲೇಪಿತ ನೈಲಾನ್, ಸಿಂಥೆಟಿಕ್ ಅಥವಾ ಇತರ ಯಾವುದೇ ದಾರದ ಮಾರಾಟ, ಉತ್ಪಾದನೆ, ಸಂಗ್ರಹಣೆ, ಪೂರೈಕೆ ಮತ್ತು ಬಳಕೆಯನ್ನು ನಿಷೇಧಿಸಿದ್ದು, ಗಾಳಿಪಟ ಹಾರಿಸಲು ಯಾವುದೇ ಚೂಪಾದ ಲೋಹ ಅಥವಾ ಗಾಜು ಅಥವಾ ಅಂಟುಗಳು ಅಥವಾ ದಾರವನ್ನು ಬಲಪಡಿಸುವ ವಸ್ತುಗಳಿಂದ ಮುಕ್ತವಾಗಿರುವ ಹತ್ತಿ ದಾರಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.