ADVERTISEMENT

ಜಮ್ಮು ಕಾಶ್ಮೀರಕ್ಕೆ ಜಾಗತಿಕ ನಿಯೋಗ: ಕೇಂದ್ರದ ಆಯೋಜನೆ

ಏಜೆನ್ಸೀಸ್
Published 9 ಜನವರಿ 2020, 4:45 IST
Last Updated 9 ಜನವರಿ 2020, 4:45 IST
   

ಶ್ರೀನಗರ: ಅಮೆರಿಕವೂ ಸೇರಿದಂತೆ ವಿವಿಧ ರಾಷ್ಟ್ರಗಳ 16 ಮಂದಿ ರಾಜತಾಂತ್ರಿಕರ ನಿಯೋಗವೊಂದನ್ನುಭಾರತ ಸರ್ಕಾರ ಎರಡು ದಿನಗಳ ಜಮ್ಮು ಕಾಶ್ಮೀರ ಭೇಟಿಗೆ ಕರೆದೊಯ್ಯಲಿದೆ. ಪ್ರವಾಸ ಇಂದಿನಿಂದ ಆರಂಭವಾಗಲಿದೆ.

ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು ಮತ್ತು ವಿಭಜನೆಯ ನಂತರ ಅಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ. ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ರಾಜ್ಯದಲ್ಲಿ ಇಂಟರ್‌ನೆಟ್‌ ಸೇವೆಯನ್ನು ಆರು ತಿಂಗಳಕಾಲ ಅಮಾನತಿನಲ್ಲಿಡಲಾಗಿತ್ತು. ಈ ಬಗ್ಗೆ ಜಾಗತಿಕವಾಗಿ ಕಳವಳವ್ಯಕ್ತವಾಗಿರುವಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ವಸ್ತುಸ್ಥಿತಿ ಅಧ್ಯಯನಕ್ಕಾಗಿಹೊರ ರಾಷ್ಟ್ರಗಳ ರಾಜತಾಂತ್ರಿಕರಿಗೆ ಎರಡು ದಿನಗಳ ಜಮ್ಮು ಕಾಶ್ಮೀರದ ಪ್ರವಾಸ ಆಯೋಜಿಸಿದೆ.

ಅಮೆರಿಕ, ವಿಯೆಟ್ನಾಂ, ದಕ್ಷಿಣ ಕೊರಿಯಾ, ಉಜ್ಬೇಕಿಸ್ತಾನ, ಗಯಾನ, ನೈಜೀರಿಯಾ, ನೈಗರ್‌, ಅರ್ಜೆಂಟೀನಾ, ನಾರ್ವೆ, ಮೊರಕ್ಕೊ, ಮಾಲ್ಡೀವಸ್‌, ಫಿಜಿ, ಟೊಗೊ, ಬಾಂಗ್ಲಾದೇಶ ಮತ್ತು ಪೇರುವಿನ ರಾಜತಾಂತ್ರಿಕರು ಈ ನಿಯೋಗದಲ್ಲಿ ಇರಲಿದ್ದಾರೆ.

ADVERTISEMENT

16 ಮಂದಿಯ ನಿಯೋಗದಲ್ಲಿ ಐರೋಪ್ಯ ಒಕ್ಕೂಟದ ಯಾವೊಂದು ರಾಷ್ಟ್ರವೂ ಭಾಗಿಯಾಗಿಲ್ಲ. ‘ಪೂರ್ವ ನಿರ್ಧರಿತ’ ಪ್ರವಾಸದ ಅಗತ್ಯ ಇಲ್ಲ ಎಂದು ಐರೋಪ್ಯಒಕ್ಕೂಟ ಹೇಳಿದೆ ಎನ್ನಲಾಗಿದೆ. ಆದರೆ,ಐರೋಪ್ಯ ರಾಷ್ಟ್ರಗಳ ನಿಯೋಗವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿತ್ತು.

ಎರಡು ದಿನಗಳ ಈ ಪ್ರವಾಸದಲ್ಲಿ ಮೊದಲಿಗೆ ಶ್ರೀನಗರ ಭೇಟಿ ನಿಗದಿಯಾಗಿದೆ. ನಂತರ ಜಮ್ಮುವಿಗೆ ತೆರಳಲಿರುವ ನಿಯೋಗ ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಜಿ.ಸಿ ಮುರ್ಮು ಅವರೂ ಸೇರಿದಂತೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದೆ.

‘ನಿಯೋಗವನ್ನು ಮೊದಲಿಗೆ ಶ್ರೀನಗರದ ಬಾದಾಮಿ ಬಾಗ್‌ಗೆ ಕರೆದೊಯ್ಯಲಾಗುವುದು. ಅಲ್ಲಿ ಸೇನಾ ಅಧಿಕಾರಿಗಳು ರಾಜ್ಯದಭದ್ರತಾ ವ್ಯವಸ್ಥೆ ಕುರಿತು ಮಾಹಿತಿ ಒದಗಿಸಲಿದ್ದಾರೆ. ನಂತರ ನಿಯೋಗವು ಅಲ್ಲಿನ ಸಾರ್ವಜನಿಕ ಸಂಘ ಸಂಸ್ಥೆಗಳನ್ನು ಭೇಟಿಯಾಗಿ ಮಾಹಿತಿ ಪಡೆಯಲಿದೆ. ಅದರಲ್ಲಿ ಪತ್ರಕರ್ತರೂ ಇರಲಿದ್ದಾರೆ,’ ಎಂದು ಸರ್ಕಾರದ ಮೂಲಗಳು ತಿಸಿವೆ.

ಪ್ರವಾಸದ ವೇಳಾಪಟ್ಟಿಯ ಗೊಂದಲದಿಂದ ಆಸ್ಟ್ರೇಲಿಯ ಮತ್ತು ಗಲ್ಫ್‌ ರಾಷ್ಟ್ರಗಳ ಪ್ರತಿನಿಧಿಗಳು ನಿಯೋಗದಿಂದ ಹೊರಗುಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.