ADVERTISEMENT

ಕಾರ್ಮಿಕರ ಭವಿಷ್ಯ ನಿಧಿ ಶೇ 8.25ಕ್ಕೆ ನಿಗದಿ: ಮೂರು ವರ್ಷದಲ್ಲೇ ಗರಿಷ್ಠ ಬಡ್ಡಿ ದರ

ಪಿಟಿಐ
Published 10 ಫೆಬ್ರುವರಿ 2024, 9:33 IST
Last Updated 10 ಫೆಬ್ರುವರಿ 2024, 9:33 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಠೇವಣಿಗೆ 2023–24ನೇ ಸಾಲಿನಲ್ಲಿ ಶೇ 8.25ರ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ. ಇದು ಕಳೆದ ಮೂರು ವರ್ಷಗಳಲ್ಲೇ ಗರಿಷ್ಠ ದರವಾಗಿದೆ.

2023ರ ಮಾರ್ಚ್‌ನಲ್ಲಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯು 2022–23ನೇ ಸಾಲಿನ ಇಪಿಎಫ್‌ ಮೇಲಿನ ಬಡ್ಡ ದರವನ್ನು ಶೇ 8.15ಕ್ಕೆ ನಿಗದಿಪಡಿಸಿತ್ತು. 2021–22ನೇ ಸಾಲಿನಲ್ಲಿ ಇದು ಶೇ 8.10ರಷ್ಟಿತ್ತು. 6 ಕೋಟಿ ಠೇವಣಿದಾರರಿಗೆ ಸಿಗುತ್ತಿದ್ದ ಬಡ್ಡಿದರ ಕಳೆದ ನಾಲ್ಕು ದಶಕಗಳ ಹೋಲಿಸಿದಲ್ಲಿ 2021–22ರಲ್ಲಿ ಅತ್ಯಂತ ಕನಿಷ್ಠ ಶೇ 8.10ಕ್ಕೆ ನಿಗದಿಪಡಿಸಲಾಗಿತ್ತು. 2020–21ರಲ್ಲಿ ಇದು ಶೇ 8.5ರಷ್ಟಿತ್ತು. 1977–78ರಲ್ಲಿ ಇಪಿಎಫ್‌ ಮೇಲಿನ ಬಡ್ಡಿದರ ಶೇ 8ರಷ್ಟಿತ್ತು.

ADVERTISEMENT

ಈ ಕುರಿತಂತೆ ಕಾರ್ಮಿಕ ಇಲಾಖೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ನೀತಿ ನಿರ್ಧಾರದ ಉನ್ನತ ಸಮಿತಿಯಾಗಿರುವ, ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು ತನ್ನ 235ನೇ ಸಭೆಯಲ್ಲಿ 2023–24ನೇ ಸಾಲಿನ ಬಡ್ಡಿ ದರವನ್ನು ನಿಗದಿಪಡಿಸಿದೆ. ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಕಾರ್ಮಿಕ ಸಚಿವ ಭುಪೇಂದ್ರ ಯಾದವ್ ವಹಿಸಿದ್ದರು.

‘ಆರ್ಥಿಕ ವರ್ಷ 2024ಕ್ಕೆ ಮಂಡಳಿಯು ಈ ವರ್ಷ ಇಪಿಎಫ್ ಸದಸ್ಯರ ಖಾತೆಗಳಿಗೆ ₹1.07 ಲಕ್ಷ ಕೋಟಿಯನ್ನು ಹಂಚಲು ನಿರ್ಧರಿಸಿದೆ. ಈ ಹಣವು ಮೂಲ ಮೊತ್ತವಾದ ₹13 ಲಕ್ಷ ಕೋಟಿಗೆ ಬಂದ ಬಡ್ಡಿಯ ದರ ಇದಾಗಿದೆ. 2022–23ನೇ ಸಾಲಿನಲ್ಲಿದ್ದ ಮೂಲ ಮೊತ್ತ ₹ 11.02 ಲಕ್ಷ ಕೋಟಿಗೆ ಕಳೆದ ಸಾಲಿನಲ್ಲಿ ₹91.15 ಸಾವಿರ ಕೋಟಿ ಬಡ್ಡಿ ಲಭಿಸಿತ್ತು.

ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಈ ಬಾರಿ ಆದಾಯ ಶೇ 17.39ರಷ್ಟು ಹೆಚ್ಚಾಗಿದೆ. ಮತ್ತೊಂದೆಡೆ ಮೂಲ ಮೊತ್ತವು ಶೇ 17.97ರಷ್ಟು ಹೆಚ್ಚಳವಾಗಿದೆ. 

ಹಿಂದಿನ ವರ್ಷಗಳಲ್ಲಿ ನಿಗದಿಯಾದ ಇಪಿಎಫ್ ಮೇಲಿನ ಬಡ್ಡಿದರ

  • 2019–20– ಶೇ 8.5

  • 2018–19– ಶೇ 8.65

  • 2016–17– ಶೇ 8.55

  • 2015–16– ಶೇ 8.8

  • 2014–15– ಶೇ 8.75

  • 2013–14– ಶೇ 8.75

  • 2012–13– ಶೇ 8.5

  • 2011–12– ಶೇ 8.25

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.