ADVERTISEMENT

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ದಾಳಿಯಾಗಿಲ್ಲ: ಗಾರ್ಸೆಟ್ಟಿ

ವಿಜಯ್ ಜೋಷಿ
Published 20 ಮೇ 2024, 23:30 IST
Last Updated 20 ಮೇ 2024, 23:30 IST
<div class="paragraphs"><p>ಎರಿಕ್ ಗಾರ್ಸೆಟ್ಟಿ</p></div>

ಎರಿಕ್ ಗಾರ್ಸೆಟ್ಟಿ

   

ಎರಿಕ್ ಗಾರ್ಸೆಟ್ಟಿ ಅವರು ಭಾರತದಲ್ಲಿನ ಅಮೆರಿಕದ ರಾಯಭಾರಿ ಆಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷ ಸಂದಿದೆ. ಈ ಹೊತ್ತಿನಲ್ಲಿ ಅವರು ‘ಪ್ರಜಾವಾಣಿ’ಗೆ ನೀಡಿರುವ ಇ–ಮೇಲ್ ಸಂದರ್ಶನದಲ್ಲಿ ಭಾರತ–ಅಮೆರಿಕ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಅಮೆರಿಕದಲ್ಲಿ ಭಾರತದ ವಿದ್ಯಾರ್ಥಿಗಳು ಸುರಕ್ಷಿತ ಎನ್ನುವ ಭರವಸೆ ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ಭಾರತದಲ್ಲಿನ ಒಂದು ವರ್ಷದ ವಾಸ್ತವ್ಯದಲ್ಲಿನ ಅತ್ಯಂತ ಸ್ಮರಣೀಯ ಅನುಭವ ಯಾವುದು?

ADVERTISEMENT

* ಈಚಿನ ದಿನಗಳಲ್ಲಿ ಅಮೆರಿಕದಲ್ಲಿ ಭಾರತ ಮೂಲದ ವಿದ್ಯಾರ್ಥಿಗಳ ಮೇಲೆ ದಾಳಿಗಳು ನಡೆದಿವೆ. ದಾಳಿಗಳು ಜನಾಂಗೀಯ ಅಥವಾ ಇತರ ಕಾರಣಗಳಿಗೆ ನಡೆದಿರಬಹುದು. ಭಾರತ ಮೂಲದ ವಿದ್ಯಾರ್ಥಿಗಳ ರಕ್ಷಣೆ ವಿಚಾರವಾಗಿ ಯಾವ ಭರವಸೆ ನೀಡುತ್ತೀರಿ?

ಅಮೆರಿಕದಲ್ಲಿನ ಭಾರತೀಯ ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ನಾವು ಕಾಳಜಿ ಹೊಂದಿದ್ದೇವೆ. ಇದು ನಮಗೆ ಅತ್ಯಂತ ಆದ್ಯತೆಯ ವಿಚಾರ. ಅಮೆರಿಕಕ್ಕೆ ಅಧ್ಯಯನಕ್ಕೆ ಬರುವ ಮಕ್ಕಳು ನಮ್ಮ ಮಕ್ಕಳಂತೆಯೇ ಎಂಬ ಮಾತನ್ನು ಪಾಲಕರಿಗೆ ಹೇಳುತ್ತೇವೆ. ನಮ್ಮ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನಲ್ಲಿ ಭದ್ರತಾ ವ್ಯವಸ್ಥೆ ಇದೆ, ಸುರಕ್ಷತೆಗೆ ಸ್ಥಳೀಯ ಕಾನೂನು ಜಾರಿ ವ್ಯವಸ್ಥೆ ಇದೆ.

ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ದಾಖಲೆ ಮಟ್ಟದಲ್ಲಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿರುವಂತೆ, ಈಚಿನ ತಿಂಗಳುಗಳಲ್ಲಿನ (ದಾಳಿ) ಘಟನೆಗಳ ನಡುವೆ ಸಂಬಂಧ ಇರುವ ಸೂಚನೆಗಳು ಇಲ್ಲ, ಭಾರತೀಯ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎನ್ನಲು ಆಧಾರಗಳಿಲ್ಲ.

* ಭಾರತ ಮತ್ತು ಅಮೆರಿಕ ಹಲವು ಸಮಾನ ಧ್ಯೇಯಗಳನ್ನು ಹೊಂದಿವೆ. ಎಲ್ಲ ಭಿನ್ನಾಭಿಪ್ರಾಯಗಳ ನಡುವೆಯೂ, ಅಮೆರಿಕವು ಭಾರತದ ಜೊತೆಗಿನ ಸಂಬಂಧವನ್ನು ಹೇಗೆ ಕಾಣುತ್ತದೆ?

ಭಾರತವು ಜಾಗತಿಕ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುವುದನ್ನು, ಇಂಡೊ–ಪೆಸಿಫಿಕ್ ಪ್ರದೇಶವು ಮುಕ್ತವಾಗಿ ಇರುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾಲುದಾರ ಆಗಿರುವುದನ್ನು ನಾವು ಪೂರ್ತಿಯಾಗಿ ಬೆಂಬಲಿಸುತ್ತೇವೆ. ಜನರ ರಕ್ಷಣೆ, ಅತ್ಯಂತ ಹೆಚ್ಚಿನ ಆದ್ಯತೆ ಪಡೆದಿರುವ ಹವಾಮಾನ ಬದಲಾವಣೆಯಂತಹ ವಿಷಯಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಯಾವುದೇ ಸ್ನೇಹಿತರ ರೀತಿಯಲ್ಲೇ, ನಾವು ಎಲ್ಲ ವಿಷಯಗಳ ಬಗ್ಗೆಯೂ ಸದಾಕಾಲ ಸಮ್ಮತಿ ಹೊಂದಿರಲು ಸಾಧ್ಯವಿಲ್ಲ. ಆದರೆ ನಮ್ಮ ದೇಶಗಳನ್ನು ಒಟ್ಟಾಗಿರಿಸುವ ಸಂಗತಿಗಳು ನಮ್ಮ ನಡುವೆ ಕಂದಕ ಸೃಷ್ಟಿಸುವ ಸಂಗತಿಗಳಿಗಿಂತ ಹೆಚ್ಚು ಗಟ್ಟಿಯಾಗಿವೆ ಎಂಬ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಈಗ ಸ್ಪಷ್ಟತೆ ಇದೆ. ಭಾರತ ಮತ್ತು ಅಮೆರಿಕ ಒಟ್ಟಾಗಿ ಕೆಲಸ ಮಾಡಿದಾಗ, ಎರಡೂ ದೇಶಗಳಿಗೂ ಇಡೀ ಜಗತ್ತಿಗೂ ಗಣನೀಯ ಲಾಭ ಆಗುತ್ತದೆ.

* ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್ ಕಚೇರಿ ಆರಂಭಿಸುವ ಘೋಷಣೆ ಆಗಿ ಎರಡು ವರ್ಷಗಳು ಕಳೆದಿದ್ದರೂ ಕಚೇರಿ ಆರಂಭವಾಗಿಲ್ಲ. ಈ ಕಚೇರಿ ಬೆಂಗಳೂರಿನಲ್ಲಿ ಯಾವಾಗ ಆರಂಭವಾಗುತ್ತದೆ?

ಈ ನಿಟ್ಟಿನಲ್ಲಿ ನಾವು ಕಠಿಣ ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ. ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಹೊಸ ಕಾನ್ಸುಲೇಟ್ ಕಚೇರಿಗಳನ್ನು ಆರಂಭಿಸುವ ವಿಚಾರವಾಗಿ ನಾವು ಭಾರತದ ಸಹವರ್ತಿಗಳ ಜೊತೆ ಸಮನ್ವಯದಿಂದ ಮುಂದಡಿ ಇರಿಸಿದ್ದೇವೆ. 

* ಭಾರತ ಮತ್ತು ಅಮೆರಿಕದ ನಡುವಿನ ಪಾಲುದಾರಿಕೆ ಇನ್ನಷ್ಟು ಬಲಿಷ್ಠಗೊಳ್ಳಲು ಮುಂದಿನ ದಿನಗಳಲ್ಲಿ ಯಾವ ಕ್ಷೇತ್ರಗಳು ನೆರವಾಗಲಿವೆ?

ನಮ್ಮ ಪಾಲುದಾರಿಕೆಯನ್ನು ಮುಂದಕ್ಕೆ ಒಯ್ಯಲು ನಾವು ಹಲವು ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಸೆಮಿಕಂಡಕ್ಟರ್ ಪೂರೈಕೆ ವ್ಯವಸ್ಥೆಯ ಬಲ‍ಪಡಿಸುವಿಕೆ, ಉನ್ನತ ತಂತ್ರಜ್ಞಾನದ ರಕ್ಷಣಾ ಬಿಡಿಭಾಗಗಳು ಹಾಗೂ ಉಪಕರಣಗಳನ್ನು ಒಟ್ಟಾಗಿ ಉತ್ಪಾದಿಸುವುದು, ಭಾರತದ ಗಗನಯಾತ್ರಿಗಳಿಗೆ ನಾಸಾದಿಂದ ತರಬೇತಿ, ಜಂಟಿಯಾಗಿ ಉಪಗ್ರಹಗಳ ಉಡಾವಣೆ, ಸಂಶೋಧನೆ ಹಾಗೂ ಶಿಕ್ಷಣದಲ್ಲಿ ಪಾಲುದಾರಿಕೆಯ ವಿಸ್ತರಣೆ ಮುಖ್ಯವಾದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.