ADVERTISEMENT

ಅಯೋಧ್ಯೆ: ರಾಮಮಂದಿರ ನಿರ್ಮಾಣಕ್ಕೆ ಅಂದಾಜು ₹1,800 ಕೋಟಿ ವೆಚ್ಚ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೇಳಿಕೆ

ಪಿಟಿಐ
Published 12 ಸೆಪ್ಟೆಂಬರ್ 2022, 11:11 IST
Last Updated 12 ಸೆಪ್ಟೆಂಬರ್ 2022, 11:11 IST
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಮಾದರಿ  –ಪಿಟಿಐ ಚಿತ್ರ 
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ಮಾದರಿ  –ಪಿಟಿಐ ಚಿತ್ರ    

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಿಸಲು ಅಂದಾಜು ₹1,800 ಕೋಟಿ ವೆಚ್ಚವಾಗಲಿದೆ ಎಂದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ರಚನೆಯಾಗಿರುವ ಟ್ರಸ್ಟ್‌, ಭಾನುವಾರ ಇಲ್ಲಿನ ಫೈಜಾಬಾದ್ ಸರ್ಕಿಟ್ ಹೌಸ್‌ನಲ್ಲಿ ನಡೆದ ಸುದೀರ್ಘ ಸಭೆಯ ನಂತರ ಮಂದಿರ ನಿರ್ಮಾಣ ರಚನೆಯ ನಿಯಮಗಳು ಮತ್ತು ಕೈಪಿಡಿಗೆ ಅನುಮೋದನೆ ನೀಡಿದೆ.

ಮಂದಿರದ ಸಂಕೀರ್ಣದಲ್ಲಿ ಪ್ರಮುಖ ಹಿಂದೂ ದಾರ್ಶನಿಕರು ಹಾಗೂ ರಾಮಾಯಣ ಕಾಲದ ಪ್ರಮಖ ಪಾತ್ರಗಳ ವಿಗ್ರಹಗಳಿಗೆ ಸ್ಥಳಾವಕಾಶ ಕಲ್ಪಿಸಲು ಟ್ರಸ್ಟ್‌ನ ಸದಸ್ಯರು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಿದರು.

ADVERTISEMENT

ತಜ್ಞರು ಸಲ್ಲಿಸಿದ ವರದಿಯ ಆಧಾರದ ಮೇಲೆ, ರಾಮ ಮಂದಿರ ನಿರ್ಮಾಣಕ್ಕೆ ಮಾತ್ರ ₹1,800 ಕೋಟಿ ವೆಚ್ಚವಾಗಲಿದೆ ಎಂದು ಟ್ರಸ್ಟ್ ಅಂದಾಜಿಸಿದೆ.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ಸುದೀರ್ಘ ಚಿಂತನೆ ಮತ್ತು ಸಂಬಂಧಪಟ್ಟ ಎಲ್ಲರ ಸಲಹೆಗಳ ನಂತರ ಟ್ರಸ್ಟ್‌ನ ನಿಯಮಗಳು ಮತ್ತು ಉಪನಿಯಮಗಳನ್ನು ಸಭೆಯಲ್ಲಿ ಅಂತಿಮಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಸಭೆಗೆ ಟ್ರಸ್ಟ್‌ನ 15 ಸದಸ್ಯರ ಪೈಕಿ 14 ಸದಸ್ಯರು ಹಾಜರಾಗಿದ್ದರು ಎಂದೂ ಅವರು ಹೇಳಿದ್ದಾರೆ. ಕೆಲವರು ಭೌತಿಕವಾಗಿ ಹಾಜರಾಗಿದ್ದರೆ, ಮತ್ತೆ ಕೆಲವರು ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀರಾಮ ಮಂದಿರ ನಿರ್ಮಾಣದ ಕಾಮಗಾರಿಯು 2023ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. 2024ರ ಜನವರಿಯಲ್ಲಿ ಮಕರ ಸಂಕ್ರಮಣ ಹಬ್ಬದ ದಿನದಂದು ಶ್ರೀರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ನಿರೀಕ್ಷೆ ಇದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.