ನವದೆಹಲಿ: ಸಂಸತ್‌ನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಸಂಸದೆ ಮಹುವಾ ಮೋಯಿತ್ರಾ ಅವರನ್ನು ಸದನದಿಂದ ಉಚ್ಚಾಟಿಸಬೇಕು ಎಂದು ಶಿಫಾರಸು ಮಾಡಿರುವ ನೀತಿ ಸಮಿತಿಯು, ತನ್ನ ವರದಿಯನ್ನು ಇಂದು (ಶುಕ್ರವಾರ) ಲೋಕಸಭೆಯಲ್ಲಿ ಮಂಡಿಸಿದೆ.
ಪ್ರಶ್ನೋತ್ತರ ವೇಳೆ ಉಂಟಾದ ಗದ್ದಲದಿಂದಾಗಿ 12 ಗಂಟೆ ವರೆಗೆ ಮುಂದೂಡಲಾಗಿದ್ದ ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆ ನೀತಿ ಸಮಿತಿಯ ಮುಖ್ಯಸ್ಥ ವಿನೋದ್ ಕುಮಾರ್ ಸೋನಕರ್ ಅವರು ಸಮಿತಿಯ ಮೊದಲ ವರದಿಯನ್ನು ಮಂಡಿಸಿದರು. ವರದಿಯು 495 ಪುಟಗಳನ್ನು ಒಳಗೊಂಡಿದೆ.
ಈ ವೇಳೆ ಟಿಎಂಸಿ ಹಾಗೂ ಕಾಂಗ್ರೆಸ್ ಪಕ್ಷದ ಕೆಲವು ಸದಸ್ಯರು ಸದನದ ಬಾವಿಗೆ ಇಳಿದು, ವರದಿಯ ಪ್ರತಿಯನ್ನು ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಹೀಗಾಗಿ ಸದನವನ್ನು ಮತ್ತೆ ಮುಂದೂಡಲಾಯಿತು.
ಮಹುವಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸುವಂತೆ ಶಿಫಾರಸು ಮಾಡಿರುವ ವರದಿಯನ್ನು ನೀತಿ ಸಮಿತಿಯು ನವೆಂಬರ್ 9ರಂದು ಅಂಗೀಕರಿಸಿತ್ತು. ಮಹುವಾ ಅವರನ್ನು ಉಚ್ಚಾಟನೆ ಮಾಡಬೇಕಾದರೆ ಈ ಬಗ್ಗೆ ಸರ್ಕಾರ ನಿಲುವಳಿ ಮಂಡಿಸಿ, ಸದನದ ಅಂಗೀಕಾರ ಪಡೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.