ADVERTISEMENT

ಟ್ವಿಟರ್ ಮೇಲೆ ಸರ್ಕಾರ ಒತ್ತಡ ಹೇರುತ್ತಿದ್ದದ್ದು ಚಿಕ್ಕ ಮಕ್ಕಳಿಗೂ ಗೊತ್ತು: ಟಿಕಾಯತ್

ಪಿಟಿಐ
Published 13 ಜೂನ್ 2023, 12:44 IST
Last Updated 13 ಜೂನ್ 2023, 12:44 IST
   

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಕುರಿತಂತೆ ಟ್ವೀಟ್ ಮಾಡಲಾಗುತ್ತಿದ್ದ ಖಾತೆಗಳನ್ನು ಬಂದ್ ಮಾಡಲಾಗುತ್ತಿತ್ತು ಎಂದು ಭಾರತೀಯ ಕಿಸಾನ್ ಯೂನಿಯನ್(ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ರೈತರ ಪ್ರತಿಭಟನೆ ಸಂದರ್ಭ ಕೆಲ ಟ್ವಿಟರ್ ಖಾತೆಗಳನ್ನು ಬಂದ್ ಮಾಡದಿದ್ದರೆ ಟ್ವಿಟರ್ ಬಾಗಿಲು ಮುಚ್ಚಿಸುವುದಾಗಿ ಸರ್ಕಾರದಿಂದ ಬೆದರಿಕೆ ಹಾಕಲಾಗಿತ್ತು ಎಂಬ ಟ್ವಿಟರ್ ಮಾಜಿ ಸಿಇಒ ಜಾಕ್ ಡೋರ್ಸಿ ಆರೋಪದ ಬೆನ್ನಲ್ಲೇ ರಾಕೇಶ್ ಟಿಕಾಯತ್ ಹೇಳಿಕೆ ಹೊರಬಿದ್ದಿದೆ.

ಕೃಷಿ ಕಾನೂನುಗಳ ವಿರುದ್ಧದ ಆಂದೋಲನದ ನೇತೃತ್ವ ವಹಿಸಿದ್ದ ಪ್ರಮುಖ ರೈತ ಮುಖಂಡರಲ್ಲಿ ಒಬ್ಬರಾದ ಟಿಕಾಯತ್, ಟ್ವಿಟರ್‌ ಮೇಲೆ ಸರ್ಕಾರದ ಒತ್ತಡವಿತ್ತು ಎಂದು ಆರೋಪಿಸಿದರು. ರೈತರ ಪ್ರತಿಭಟನೆ ಬೆಂಬಲಿಸುವ ಖಾತೆಗಳನ್ನು ಬಂದ್ ಮಾಡಬೇಕು ಅಥವಾ ಕಡಿಮೆ ರೀಚ್ ಇರಬೇಕು ಎಂದು ಸರ್ಕಾರ ಸೂಚಿಸಿತ್ತು ಎಂದಿದ್ದಾರೆ.

ADVERTISEMENT

ರೈತರ ಪ್ರತಿಭಟನೆ ಕುರಿತಾಗಿ ಪೋಸ್ಟ್ ಮಾಡಲಾಗಿದ್ದ ಟ್ವಿಟರ್ ಖಾತೆಯನ್ನು ಸರ್ಕಾರ ಬಂದ್ ಮಾಡಿಸುತ್ತೆ ಎಂಬುದು ಚಿಕ್ಕಮಕ್ಕಳಿಗೂ ಗೊತ್ತಿತ್ತು. ಹಲವು ಖಾತೆಗಳು ಈಗಲೂ ಬಂದ್ ಆಗಿಯೇ ಇವೆ. ಅವರು ಪ್ರತಿಭಟನೆಗಳನ್ನು ಹೇಗೆ ಹತ್ತಿಕ್ಕುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಟಿಕಾಯತ್ ದೂರಿದ್ದಾರೆ.

ತನ್ನ ಧೋರಣೆ ವಿರುದ್ಧದ ಯಾವುದೇ ವಿರೋಧವನ್ನು ಬಿಜೆಪಿ ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದೂ ಅವರು ಟೀಕಿಸಿದ್ದಾರೆ.

ಆರೋಪಗಳನ್ನು ತಳ್ಳಿಹಾಕಿರುವ ಕೇಂದ್ರ ಸರ್ಕಾರವು, ಡೋರ್ಸಿ ಅವರ ಅವಧಿಯಲ್ಲಿ ಟ್ವಿಟರ್ ಆಡಳಿತವು ಭಾರತೀಯ ಕಾನೂನಿನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಲ್ಲಿ ಸಮಸ್ಯೆ ಹೊಂದಿತ್ತು ಎಂದು ಹೇಳಿದೆ.

2020ರಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಬಗ್ಗೆ ಸರ್ಕಾರವನ್ನು ಟೀಕಿಸುವ ಪೋಸ್ಟ್‌ಗಳನ್ನು ತೆಗೆದುಹಾಕುವ ಮತ್ತು ಖಾತೆಗಳನ್ನು ನಿರ್ಬಂಧಿಸುವ ಸರ್ಕಾರದ ಸೂಚನೆಗಳನ್ನು ಅನುಸರಿಸದಿದ್ದಲ್ಲಿ ಭಾರತ ಸರ್ಕಾರವು ಟ್ವಿಟರ್ ಅನ್ನು ಮುಚ್ಚುವ ಮತ್ತು ಉದ್ಯೋಗಿಗಳ ಮೇಲೆ ದಾಳಿ ಮಾಡುವ ಬೆದರಿಕೆಗಗಳನ್ನು ಹಾಕಿತ್ತು ಎಂದು ಯೂಟ್ಯೂಬ್ ಸಂದರ್ಶನವೊಂದರಲ್ಲಿ ಜಾಕ್ ಡೋರ್ಸಿ ಆರೋಪಿಸಿದ್ದರು.

ಈ ನಡುವೆ, ಆರೋಪಗಳನ್ನು ತಳ್ಳಿ ಹಾಕಿರುವ ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ‘ಜಾಕ್ ಡೋರ್ಸಿ ಅವರ ಅವಧಿಯಲ್ಲಿ ಟ್ವಿಟರ್ ನಿರಂತರವಾಗಿ ಭಾರತದ ಕಾನೂನನ್ನು ಉಲ್ಲಂಘಿಸಿತ್ತು. ವಾಸ್ತವವಾಗಿ ಅವರು 2020ರಿಂದ 2022ರವರೆಗೆ ಪದೇ ಪದೇ ಕಾನೂನನ್ನು ಉಲ್ಲಂಘಿಸುತ್ತಿದ್ದರು. ಜೂನ್ 2022ರಲ್ಲಿ ಅಂತಿಮವಾಗಿ ಕಾನೂನು ಪಾಲನೆಗೆ ಮುಂದಾದರು’ಎಂದುು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.