ಮುಂಬೈ: ಅಪ್ರಾಪ್ತ ವಯಸ್ಸಿನ ಪತ್ನಿಯ ಜೊತೆಗೆ ದೈಹಿಕ ಸಂಬಂಧ ಹೊಂದುವುದು ಅತ್ಯಾಚಾರಕ್ಕೆ ಸಮ ಎಂದು ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ತೀರ್ಪು ನೀಡಿದೆ. ಇಂತಹ ಪ್ರಕರಣದಲ್ಲಿ ಪತ್ನಿಯ ಸಮ್ಮತಿ ಇದ್ದರೂ ಅದು ಪರಿಗಣಿಸಲಾಗದು ಎಂದು ಹೇಳಿದೆ.
‘18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯೊಂದಿಗೆ, ಆಕೆಯ ಅನುಮತಿ ಇದ್ದರೂ ದೈಹಿಕ ಸಂಪರ್ಕ ನಡೆಸಿದರೆ ಅತ್ಯಾಚಾರ ಪ್ರಕರಣದಡಿ ದೂರು ದಾಖಲಿಸಬಹುದು’ ಎಂದು ನ್ಯಾಯಮೂರ್ತಿ ಗೋವಿಂದ ಸನಾಪ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗೆ ಹೇಳಿದೆ.
ಪೋಕ್ಸೊ ಕಾಯ್ದೆಯಡಿ ತನ್ನನ್ನು ದೋಷಿ ಎಂದು ಘೋಷಿಸಿದ ವಾರ್ಧಾ ಜಿಲ್ಲೆಯ ನ್ಯಾಯಾಲಾಯವೊಂದರ ವಿರುದ್ದ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯೊಬ್ಬರ ಅರ್ಜಿಯ ವಿಚಾರಣೆ ವೇಳೆ ಕೋರ್ಟ್ ಈ ರೀತಿ ಹೇಳಿದೆ.
ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯಯನ್ನು 2019ರ ಮೇ 25ರಂದು ಬಂಧಿಸಲಾಗಿತ್ತು. ಈ ವೇಳೆ ಅಪ್ರಾಪ್ತ ದೂರದಾರೆ 31 ವಾರಗಳ ಗರ್ಭಿಣಿಯಾಗಿದ್ದರು.
ದೂರಿನ ಪ್ರಕಾರ, ವ್ಯಕ್ತಿಯು ಆಕೆಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುತ್ತೇನೆ ಎಂದು ಮಾತು ನೀಡಿ ಬಲವಂತದ ಲೈಂಗಿಕ ಕ್ರಿಯೆ ನಡೆಸಿದ್ದ. ಮದುವೆಯಾಗಬೇಕು ಎಂದು ಆಕೆ ಒತ್ತಾಯಿಸಿದಾಗ, ಬಾಡಿಗೆ ಮನೆಯೊಂದರಲ್ಲಿ ನೆರೆಹೊರೆಯವರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು, ಮದವೆಯಾಗಿದ್ದಾಗಿ ಆಕೆಯನ್ನು ನಂಬಿಸಿದ್ದ.
ಇದಾದ ಬಳಿಕ ಗರ್ಭಪಾತ ಮಾಡಬೇಕು ಎಂದು ಪೀಡಿಸಿದ್ದಾನೆ. ಆಕೆ ಒಪ್ಪದಿದ್ದಾಗ ಹಲ್ಲೆಯೂ ನಡೆಸಿದ್ದ. ಪೋಷಕರ ಮನೆಗೆ ಹೋದ ಬಳಿಕವೂ ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಈ ವೇಳೆ ಆತ ಮದುವೆಯ ನಾಟಕವಾಡಿ, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಗೊತ್ತಾಗಿದೆ. ಅಂದಿನಿಂದ ಅವನು ಅವಳನ್ನು ನಿರ್ಲಕ್ಷಿಸತೊಡಗಿದ್ದ. ಅಲ್ಲದೆ ಆಕೆಯ ಗರ್ಭದಲ್ಲಿರುವ ಮಗು ತನ್ನದಲ್ಲವೆಂದು ವಾದಿಸಿದ್ದ.
ಈ ಸಂಬಂಧ ವಾರ್ಧಾ ಪೊಲೀಸ್ ಠಾಣೆಯ ಬಾಲ ಕಲ್ಯಾಣ ಸಮಿತಿ ವಿಭಾಗದಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದರು. ವಿಚಾರಣಾ ನ್ಯಾಯಾಲಯದಲ್ಲಿ ಇದನ್ನು ಒಪ್ಪಿಕೊಂಡಿದ್ದಲ್ಲದೆ, ಹಾರ ಬದಲಾಯಿಸುವ ಚಿತ್ರಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿ, ಆರೋಪಿ ತನ್ನ ಗಂಡ ಎಂದು ಹೇಳಿಕೊಂಡಿದ್ದರು.
ಇದನ್ನೇ ಆಧಾರವಾಗಿಟ್ಟುಕೊಂಡು ಆರೋಪಿಯು, ಆಕೆ ನನ್ನ ಪತ್ನಿಯಾಗಿದ್ದು, ಒಪ್ಪಿಗೆಯ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು. ಆದ್ದರಿಂದ ಅತ್ಯಾಚಾರ ಎನ್ನಲಾಗದು ಎಂದು ವಾದಿಸಿದ್ದರು.
‘ಈ ಪ್ರಕರಣದಲ್ಲಿ, ಅಪರಾಧ ನಡೆದ ದಿನಾಂಕದಂದು ಸಂತ್ರಸ್ತೆಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇತ್ತು. ವೈದ್ಯಕೀಯ ಅಧಿಕಾರಿಯ ಸಾಕ್ಷ್ಯವು ಮಾತ್ರವಲ್ಲದೆ, ಅವಳ ಜನ್ಮ ಪ್ರಮಾಣಪತ್ರ, ಡಿಎನ್‌ಎ ವರದಿಯನ್ನೂ ನ್ಯಾಯಪೀಠ ಗಮನಿಸಿದೆ’ ಎಂದು ತೀರ್ಪು ನೀಡುವಾಗ ಕೋರ್ಟ್ ಹೇಳಿದೆ.
‘ಸಾಕ್ಷಿಗಳನ್ನು ಮರುಪರಿಶೀಲನೆ ಮಾಡಲಾಗಿದ್ದು, ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಸರಿಯಾದ ತೀರ್ಪನ್ನೇ ನೀಡಿದ್ದಾರೆ. ಅವರ ತೀರ್ಪಿಗೆ ಸಮರ್ಪಕ ಕಾರಣಗಳೂ ಇವೆ. ದಾಖಲೆಯಲ್ಲಿರುವ ಸಾಕ್ಷ್ಯವನ್ನು ತಿರಸ್ಕರಿಸಲು ಮತ್ತು ನಂಬದಿರಲು ಯಾವುದೇ ಕಾರಣ ಕಾಣುತ್ತಿಲ್ಲ. ಹೀಗಾಗಿ ಈ ಮೇಲ್ಮನವಿಯಲ್ಲಿ ಯಾವುದೇ ಅರ್ಥವಿಲ್ಲ’ ಎಂದು ನ್ಯಾಯಮೂರ್ತಿ ಸನಾಪ್ ಅರ್ಜಿಯನ್ನು ತಿರಸ್ಕರಿಸುವ ವೇಳೆ ಹೇಳಿದ್ದಾರೆ.
(ಲೈವ್ ಲಾ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.