ADVERTISEMENT

ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಕ್ಷಗಳೂ ನಂಬಿವೆ: ಪ್ರಧಾನಿ ಮೋದಿ

ಪಿಟಿಐ
Published 12 ಏಪ್ರಿಲ್ 2024, 7:48 IST
Last Updated 12 ಏಪ್ರಿಲ್ 2024, 7:48 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿರೋಧ ಪಕ್ಷಗಳಿಗೂ ತಿಳಿದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಳೆದ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಪಡೆದ ಬಹುಮತವನ್ನು ಬಿಜೆಪಿ ದೇಶವನ್ನು ಬಲಪಡಿಸಲು ಬಳಸಿದೆ. ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಿದ್ದ ಕಾಂಗ್ರೆಸ್‌ ಚುನಾವಣೆಯ ಬಹುಮತವನ್ನು ತನ್ನ ಕುಟುಂಬವನ್ನು ಬಲಪಡಿಸಲು ಬಳಸಿಕೊಂಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಲು ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದೆ ಎಂಬ ಪ್ರತಿಪಕ್ಷಗಳ ಟೀಕೆ ಕುರಿತು ಹಿಂದಿ ದೈನಿಕ ‘ಹಿಂದೂಸ್ತಾನ್‌’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ADVERTISEMENT

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿಯೂ ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ. ಆದರೆ, ಕೇವಲ ವಿರೋಧ ಪಕ್ಷಗಳ ನಾಯಕರನ್ನು ಮಾತ್ರ ಗುರಿಯಾಗಿಸಿದ್ದಾರೆ ಎಂದು ಕೇಂದ್ರದ ತನಿಖಾ ಸಂಸ್ಥೆಗಳ ತನಿಖೆಯ ತೂಗುಗತ್ತಿ ಅಡಿಯಲ್ಲಿರುವ ಜನರು ಹರಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕೇವಲ ಶೇ. 3ರಷ್ಟು ಮಂದಿ ಮಾತ್ರ ರಾಜಕೀಯ ಸಂಬಂಧ ಹೊಂದಿದ್ದಾರೆ. ಉಳಿದ ಶೇ. 97ರಷ್ಟು ಪ್ರಕರಣಗಳು ಅಧಿಕಾರಿಗಳು ಮತ್ತು ಅಪರಾಧಿಗಳಿಗೆ ಸಂಬಂಧಿಸಿವೆ. 2014ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ನಿರ್ಮೂಲನೆಯೇ ಬಿಜೆಪಿ ಸರ್ಕಾರದ ಆದ್ಯತೆಯಾಗಿದೆ ಎಂದು ಮೋದಿ ತಿಳಿಸಿದ್ದಾರೆ.

2014ರ ಮೊದಲು, ಜಾರಿ ನಿರ್ದೇಶನಾಲಯ ಕೇವಲ ₹25,000 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿತ್ತು. ಆದರೆ, ಕಳೆದ 10 ವರ್ಷಗಳಲ್ಲಿ ಇ.ಡಿ ವಶಪಡಿಸಿಕೊಂಡಿರುವ ಆಸ್ತಿಯ ಮೌಲ್ಯವು ಸುಮಾರು ₹1 ಲಕ್ಷ ಕೋಟಿಗೆ ಏರಿದೆ ಎಂದು ಮೋದಿ ಹೇಳಿದ್ದಾರೆ.

‘ಎನ್‌ಡಿಎ ಸರ್ಕಾರವು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಕ್ಷಗಳು ಸಹ ನಂಬುತ್ತವೆ. ಅದಕ್ಕಾಗಿಯೇ ಹಲವಾರು ವಿರೋಧ ಪಕ್ಷಗಳ ನಾಯಕರು ಚುನಾವಣಾ ಪ್ರಚಾರದಿಂದ ಹಿಂದೆ ಸರಿಯುತ್ತಿದ್ದಾರೆ. ಅನೇಕ ಜನರು ಚುನಾವಣೆ ಪ್ರಾರಂಭವಾಗುವ ಮೊದಲೇ ಇವಿಎಂಗಳನ್ನು (ಎಲೆಕ್ಟ್ರಾನಿಕ್‌ ಮತ ಯಂತ್ರಗಳು) ದೂಷಿಸಲು ಪ್ರಾರಂಭಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.