ರಾಯಪುರ: ದೇಶದಲ್ಲಿ ರಸ್ತೆ ಅಪಘಾತಗಳಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಇಂಡಿಯನ್ ರೋಡ್ ಕಾಂಗ್ರೆಸ್‌ನ 83ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು ಈ ಸಾವಿನ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಬೇಕು ಎಂದು ಹೇಳಿದರು.
ಪ್ರತಿ ವರ್ಷ 1.50 ಲಕ್ಷ ಜನರು ರಸ್ತೆ ಅಪಘಾತಗಳಿಂದ ಮೃತಪಡುತ್ತಿದ್ದಾರೆ. ಪ್ರಸ್ತುತ ಈ ಸಂಖ್ಯೆ 1.68 ಲಕ್ಷಕ್ಕೆ ಏರಿಕೆಯಾಗಿದೆ ಎಂದರು.
ಸುರಕ್ಷತೆ ಸಂಬಂಧ ರಸ್ತೆ ಮತ್ತು ಆಟೊಮೊಬೈಲ್ ಎಂಜಿನಿಯರ್‌ಗಳ ನ್ಯೂನತೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದರೆ, ವಿಸ್ತೃತ ಯೋಜನಾ ವರದಿ (ಡಿಪಿಎಆರ್) ತಯಾರಿಕೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರಿ ಎಂಜಿನಿಯರ್‌ಗಳು ಹುದ್ದೆ ತೊರೆದು ಹೆದ್ದಾರಿಗಳ ನಿರ್ಮಾಣ ಸಂಬಂಧ ಉತ್ತಮ ಡಿಪಿಆರ್ ತಯಾರಿಸುವ ಕಂಪನಿ ತೆರೆದರೆ ಅದಕ್ಕೆ ಅಂತಹವರಿಗೆ ಆದ್ಯತೆಯ ಮೇರೆಗೆ ಕೆಲಸ ನೀಡಲಾಗುವುದು ಎಂದರು.
ಆಟೊಮೊಬೈಲ್ ಎಂಜಿನಿಯರಿಂಗ್‌ನಲ್ಲಿ ಹಲವು ನಿಯಮ ರೂಪಿಸಲಾಗಿದೆ. ಹೆದ್ದಾರಿಗಳ ನಿರ್ಮಾಣದ ವೇಳೆ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವುದು ಎಂಜಿನಿಯರ್‌ಗಳ ಜವಾಬ್ದಾರಿ. ಮುಂದಿನ ದಿನಗಳಲ್ಲಿ ಒಬ್ಬ ಪ್ರಯಾಣಿಕ ಮೃತಪಟ್ಟರೂ ನನಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ ಎಂದರು.
ರಸ್ತೆ ಅಪಘಾತಗಳ ತಡೆಗೆ ಸರ್ಕಾರ ಗಂಭೀರ ಪ್ರಯತ್ನ ಮಾಡುತ್ತಿದೆ. ಮೃತಪಡುವವರ ಪೈಕಿ ಶೇ 60ರಷ್ಟು ಮಂದಿಯ ವಯಸ್ಸು 18ರಿಂದ 40 ವರ್ಷ ಇದೆ ಎಂದು ಹೇಳಿದರು.
ಕೂಲಂಕಷ ಪರಿಶೀಲನೆ ನಡೆಸದೆ ಹೆದ್ದಾರಿ ಯೋಜನೆಗಳ ಡಿಪಿಆರ್‌ಗೆ ಅನುಮೋದನೆ ನೀಡುವುದಿಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.