ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಸೈನಿಕರು ಮತ್ತು ಅವರ ಕುಟುಂಬಗಳು ಬಿಜೆಪಿ ಸರ್ಕಾರದ ತಪ್ಪು ನೀತಿಗಳ ಭಾರವನ್ನು ಹೊತ್ತಿದ್ದಾರೆ ಎಂದು ‘ಕೈ’ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ನಿರಂತರ ಭಯೋತ್ಪಾದಕ ದಾಳಿಗಳು ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ. ಪುನರಾವರ್ತಿತ ಭದ್ರತಾ ಲೋಪದ ಬಗ್ಗೆ ಕೇಂದ್ರ ಸರ್ಕಾರವು ಸಂಪೂರ್ಣ ಹೊಣೆ ಹೊರಬೇಕಿದೆ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಬೇಡಿಕೆಯಾಗಿದೆ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಶ್ಮೀರದ ದೋಡಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ 4 ವೀರ ಸೇನಾ ಯೋಧರು ಹುತಾತ್ಮರಾಗಿರುವುದು ತೀವ್ರ ದುಃಖ ತಂದಿದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಭಾರತ ಮಾತೆಯ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ನಮ್ಮ ಹೃದಯ ಮಿಡಿಯುತ್ತದೆ. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಿದೆ. ಕಾಂಗ್ರೆಸ್ ಪಕ್ಷವು ಭದ್ರತಾ ಪಡೆಗಳೊಂದಿಗೆ ಬಲವಾಗಿ ನಿಲ್ಲುತ್ತದೆ’ ಎಂದು ತಿಳಿಸಿದ್ದಾರೆ.
‘ಹೇಡಿ ಭಯೋತ್ಪಾದಕರು ನಡೆಸುತ್ತಿರುವ ಈ ಹಿಂಸಾತ್ಮಕ ಕೃತ್ಯಗಳಿಗೆ ಯಾವುದೇ ಬಲವಾದ ಮತ್ತು ನಿಸ್ಸಂದಿಗ್ಧ ಖಂಡನೆಯ ಮಾತುಗಳು ಸಾಕಾಗುವುದಿಲ್ಲ. ಕಳೆದ 36 ದಿನಗಳಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳ ಸರಣಿಯು ನಮ್ಮ ಭದ್ರತಾ ಕಾರ್ಯತಂತ್ರವನ್ನು ಮರು ಪರಿಶೀಲಿಸುವ ಅಗತ್ಯತೆ ಬಗ್ಗೆ ಎಚ್ಚರಿಸುತ್ತಿದೆ’ ಎಂದಿದ್ದಾರೆ.
‘ಭಯೋತ್ಪಾದಕ ದಾಳಿಯ ಬಗ್ಗೆ ಮೋದಿ ಸರ್ಕಾರವು ಎಂದಿನಂತೆ ‘ವ್ಯವಹಾರ’ ಎಂಬಂತೆ ವರ್ತಿಸುತ್ತಿದೆ. ಕಾಶ್ಮೀರದಲ್ಲಿ ಏನೂ ಬದಲಾಗಿಲ್ಲ. ಇಂತಹ ಸುಳ್ಳು ನಿರೂಪಣೆ ಮೂಲಕ ದೇಶದ ಭದ್ರತೆಯನ್ನು ಅಪಾಯಕ್ಕೆ ತಳ್ಳಬಾರದು. ಈ ಪ್ರದೇಶವು ದಾಳಿಗಳ ಭಾರವನ್ನು ಹೊತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು’ ಎಂದು ಖರ್ಗೆ ಕಿಡಿಕಾರಿದ್ದಾರೆ.
ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ 38 ದಿನಗಳಲ್ಲಿ ಕಾಶ್ಮೀರದಲ್ಲಿ 9 ಬಾರಿ ಭಯೋತ್ಪಾದಕ ದಾಳಿಗಳು ನಡೆದಿವೆ. 12 ಯೋಧರು ಹುತಾತ್ಮರಾಗಿದ್ದು, 13 ಸೈನಿಕರು ಗಾಯಗೊಂಡಿದ್ದಾರೆ. 10 ಮಂದಿ ನಾಗರಿಕರು ಸಾವಿಗೀಡಾಗಿದ್ದು, 44 ಮಂದಿ ಗಾಯಗೊಂಡಿದ್ದಾರೆ ಎಂದು ಕಾಂಗ್ರೆಸ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.