ADVERTISEMENT

2014ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ದುರ್ಬಳಕೆಯಾಗಿತ್ತು: ಅಮೆರಿಕದ ಸೈಬರ್ ತಜ್ಞ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 4:58 IST
Last Updated 22 ಜನವರಿ 2019, 4:58 IST
   

ಲಂಡನ್: ಇಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಹ್ಯಾಕ್ ಮಾಡಲು ಸಾಧ್ಯ ಎಂದು ಅಮೆರಿಕ ಮೂಲದ ಸೈಬರ್ ತಜ್ಞ ಸಯೀದ್ ಶುಜಾ ವಾದಿಸಿದ್ದಾರೆ.ಭಾರತದಲ್ಲಿ ಬಳಸುತ್ತಿರುವ ಇವಿಎಂ ಡಿಸೈನ್ ಮಾಡಿರುವ ಈ ತಜ್ಞ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ 'ಇವಿಎಂ ದುರ್ಬಳಕೆ' ನಡೆದಿದೆ ಎಂದಿದ್ದಾರೆ.

ಇವಿಎಂ ಹ್ಯಾಕ್ ಬಗ್ಗೆ ಇರುವ ಕಾರ್ಯಕ್ರಮವನ್ನು ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಷನ್ (ಯುರೋಪ್) ಆಯೋಜಿಸಿದ್ದು , ಹಿರಿಯ ಕಾಂಗ್ರೆಸ್ ನೇತಾರ ಕಪಿಲ್ ಸಿಬಲ್ ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಇವಿಎಂ ಹ್ಯಾಕ್ ಬಗ್ಗೆ ಬಿಜೆಪಿ ನಾಯಕ ಗೋಪಿನಾಥ್ ಮುಂಡೆ ಅವರಿಗೆ ತಿಳಿದಿತ್ತು. ಹಾಗಾಗಿ 2014ರಲ್ಲಿ ಅವರನ್ನು ಹತ್ಯೆ ಮಾಡಲಾಯಿತು ಎಂದುಇವಿಎಂ ಹ್ಯಾಕ್ ಮಾಡುವುದು ಹೇಗೆ ಎಂಬುದರ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ಸಯೀದ್ ಶುಜಾ ಹೇಳಿದ್ದಾರೆ.

ADVERTISEMENT

ನಿರ್ದಿಷ್ಟ ಪಕ್ಷಕ್ಕೆ ಮತ ದಾಖಲಾಗುವಂತೆಇವಿಎಂನ್ನು ಯಾವ ರೀತಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ 2017ರಲ್ಲಿ ದೆಹಲಿ ವಿಧಾನಸೌಧದಲ್ಲಿ ಆಮ್ ಆದ್ಮಿ ಶಾಸಕ ಸೌರಭ್ ಭಾರದ್ವಾಜ್ ನೇರ ಪ್ರಾತ್ಯಕ್ಷಿಕೆ ನೀಡಿದ್ದರು.ಆದರೆ ಇವಿಎಂನ್ನು ಯಾವುದೇ ರೀತಿಯಲ್ಲಿ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಚುನಾವಣೆ ಆಯೋಗ, ಎಎಪಿ ವಾದವನ್ನು ತಳ್ಳಿ ಹಾಕಿತ್ತು.

ಲಂಡನ್‍ನಲ್ಲಿ ಇವಿಎಂ ಹ್ಯಾಕಥಾನ್: ತಜ್ಞರು ಹೇಳಿದ್ದೇನು?
* ಬ್ಲೂಟೂತ್‍ನಿಂದ ಇವಿಎಂ ಹ್ಯಾಕ್ ಮಾಡಬಹುದಾಗಿದೆ.ಇವಿಎಂ ಹ್ಯಾಕ್ ಮಾಡಬೇಕಾದರೆ ಗ್ರಾಫೈಟ್ ಹೊಂದಿರುವ ಟ್ರಾನ್ಸ್ಮಿಟರ್ ಬೇಕು.ಇಂಥಾ ಟ್ರಾನ್ಸ್ಮಿಟರ್‌ಗಳನ್ನು 2014 ಲೋಕಸಭಾ ಚುನಾವಣೆಯಲ್ಲಿ ಬಳಸಲಾಗಿದೆ ಎಂದು ಸೈಬರ್ ತಜ್ಞ ಸಯೀದ್ ಶುಜಾ ಹೇಳಿದ್ದಾರೆ.

* ಇವಿಎಂ ಮಾಹಿತಿಗಳನ್ನು ಸ್ವಾಧೀನ ಮಾಡಲು ಕೆಲವರು ಯತ್ನಿಸಿದ್ದಾರೆ.ಇವಿಎಂ ವೈರ್‌ಲೆಸ್ ಸಂವಹನ ಮಾಡುವುದಿಲ್ಲಎಂದು ಚುನಾವಣಾ ಆಯುಕ್ತರು ಹೇಳಿದ್ದರು. ಆದಾಗ್ಯೂ, 7hz ಕಡಿಮೆ ಕಂಪನಾಂಕದ ಮಾಡ್ಯುಲೇಟರ್ ಬಳಸಿದರೆ ಇದು ಸಾಧ್ಯ.ಇದು ಮಿಲಿಟರಿ ಗ್ರೇಡ್ ಕಂಪನಾಂಕವಾಗಿದೆ.

* 2014ರಲ್ಲಿ ನಾನು ಬಿಜೆಪಿ ನೇತಾರರೊಬ್ಬರನ್ನು ಭೇಟಿಯಾಗಿದ್ದು ಅವರಿಗೆ ಈ ಬಗ್ಗೆ ಗೊತ್ತಿತ್ತು.ಆದರೆ ಅವರ ತಂಡದ ಸದಸ್ಯರೇ ಅವರನ್ನು ಹತ್ಯೆ ಮಾಡಿದರು.ಗೋಪಿನಾಥ್ ಮುಂಡೆ ಅವರಿಗೆ ಹ್ಯಾಕಿಂಗ್ ವಿಷಯ ಗೊತ್ತಿತ್ತು.ಸರ್ಕಾರದ ಮೋಸದಾಟವನ್ನು ಅವರು ಬಯಲು ಮಾಡಲು ಮುಂದಾಗಿದ್ದರು.ಹಾಗಾಗಿ ಅವರನ್ನು ಹತ್ಯೆ ಮಾಡಲಾಯಿತು ಎಂದು ಶುಜಾ ಆರೋಪಿಸಿದ್ದಾರೆ.
2014 ಜೂನ್‍ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಮಹಾರಾಷ್ಟ್ರದ ಬಿಜೆಪಿ ನಾಯಕ ಮುಂಡೆ ಸಾವಿಗೀಡಾಗಿದ್ದರು.

* ದೆಹಲಿಯಲ್ಲಿ ನಾವು ಪ್ರಸಾರವನ್ನು ನಿಲ್ಲಿಸಿದ್ದರಿಂದ ಚುನಾವಣೆಯಲ್ಲಿಆಮ್ ಆದ್ಮಿ ಪಕ್ಷ ಗೆಲುವುಸಾಧಿಸಿತು.ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಐಟಿ ಸೆಲ್ ಇವಿಎಂ ಹ್ಯಾಕ್ ಮಾಡಲು ಯತ್ನಿಸಿದ್ದಾಗ ನಾವು ಆ ಕಂಪನಾಂಕದ ಪ್ರಸಾರಕ್ಕೆ ತಡೆಯೊಡ್ಡಿದೆವು. ನಾವು ಎಎಪಿ ಪರವಾಗಿ ಮತ ದಾಖಲಾಗುವಂತೆ ಕಂಪನಾಂಕ ಪ್ರಸಾರವನ್ನ ಬದಲಿಸಿದೆವು.ನಿಜವಾದ ಫಲಿತಾಂಶವು 2009ರ ಫಲಿತಾಂಶವನ್ನೇ ಹೋಲುತ್ತಿತ್ತು.

* ಕಡಿಮೆ ಕಂಪನಾಂಕದ ಪ್ರಸಾರಣವನ್ನು ನಾವು ತಡೆಯಲು ಪ್ರಯತ್ನಿಸಿದ್ದೆವು.ನಾವು ಹ್ಯಾಕ್ ಮಾಡಲು ಸಾಧ್ಯವಾಗದೇ ಇರುವ ಇವಿಎಂನ್ನು ನೀವು ಬಳಸಿ ನೋಡೋಣ ಎಂದು ಬಿಜೆಪಿ ಐಟಿ ಸೆಲ್ ಸವಾಲೆಸೆದಿತ್ತು.

* 2014ರ ಲೋಕಸಭಾ ಚುನಾವಣೆಯಲ್ಲಿ ದುರ್ಬಳಕೆ ನಡೆದಿತ್ತು ಎಂದು ಸಯೀದ್ ಶುಜಾ ಆರೋಪಿಸಿದ್ದಾರೆ.

ಸಯೀದ್ ಶುಜಾ ನಡೆಸಿದ ವಿಡಿಯೊ ಸಂವಾದದಲ್ಲಿ ಹೇಳಿದ್ದೇನು ಎಂಬುದರ ಬಗ್ಗೆ ದಿ ಕ್ವಿಂಟ್ ವರದಿ ಹೀಗಿದೆ.

*ಕಡಿಮೆ ಕಂಪನಾಂಕದ ಸಿಗ್ನಲ್ ಬಳಸಿ ಇವಿಎಂ ಹ್ಯಾಕ್ ಮಾಡುವುದಕ್ಕೆ ಟೆಲಿಕಾಂ ದಿಗ್ಗಜ ರಿಲಾಯನ್ಸ್ ಕಮ್ಯುನಿಕೇಷನ್ಸ್ ಬಿಜೆಪಿಗೆ ಸಹಾಯ ಮಾಡಿತ್ತು.

*ಈ ಬಗ್ಗೆ ಲೇಖನ ಬರೆಯಲು ಪತ್ರಕರ್ತೆ ಗೌರಿ ಲಂಕೇಶ್ ಒಪ್ಪಿದ್ದರು. ಅವರ ಹತ್ಯೆಯಾಯಿತು.

* ಸಮಾಜವಾದಿ ಪಕ್ಷ, ಬಿಎಸ್‍ಪಿ ಮತ್ತು ಎಎಪಿ ಕೂಡಾ ಇವಿಎಂ ಹ್ಯಾಕ್ ಮಾಡುವುದು ಹೇಗೆ ಎಂದು ತಿಳಿಯಲು ತನ್ನನ್ನು ಸಮೀಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.