ADVERTISEMENT

ಇವಿಎಂ ಸುರಕ್ಷಿತ, ವಿಶ್ವಾಸಾರ್ಹ: ಸುಪ್ರೀಂ ಕೋರ್ಟ್‌

ಮತಯಂತ್ರ, ವಿವಿ–ಪ್ಯಾಟ್‌ ಮತಗಳ ಶೇ 100ರಷ್ಟು ಹೋಲಿಕೆ ಮನವಿ ತಿರಸ್ಕರಿಸಿದ ದ್ವಿಸದಸ್ಯ ಪೀಠ

ಜಯಸಿಂಹ ಆರ್.
Published 26 ಏಪ್ರಿಲ್ 2024, 22:24 IST
Last Updated 26 ಏಪ್ರಿಲ್ 2024, 22:24 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    
ಬಿಜೆಪಿಯು ಇವಿಎಂಗಳನ್ನು ತಿರುಚುವ ಮೂಲಕ ಚುನಾವಣೆಗಳನ್ನು ಗೆಲ್ಲುತ್ತದೆ ಎಂಬುದು ವಿರೋಧ ಪಕ್ಷಗಳ ಆರೋಪ. ಇವಿಎಂಗಳಲ್ಲಿ ಚಲಾಯಿಸಲಾಗುವ ಮತಗಳನ್ನು ಖಾತರಿಪಡಿಸಿಕೊಳ್ಳಲು ಹೊಸ ವ್ಯವಸ್ಥೆ ತನ್ನಿ ಎಂದು 2013ರಲ್ಲಿ ಸುಪ್ರೀಂ ಕೋರ್ಟ್‌ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು. ಅದರ ಫಲವಾಗಿ ವಿವಿ–ಪ್ಯಾಟ್‌ ವ್ಯವಸ್ಥೆ ಜಾರಿಗೆ ಬಂದಿತ್ತು. ಆದರೆ ಚುನಾವಣಾ ಆಯೋಗವು ಪ್ರತಿ ಕ್ಷೇತ್ರದಲ್ಲಿ ಶೇ 5ರಷ್ಟು ವಿವಿ–ಪ್ಯಾಟ್‌ಗಳಲ್ಲಿನ ಮತಚೀಟಿಗಳನ್ನು ಮಾತ್ರ ಇವಿಎಂ ಮತಗಳ ಜತೆಗೆ ಹೋಲಿಸಿ ನೋಡುತ್ತಿದೆ. ಈ ಹೋಲಿಕೆ ಪ್ರಮಾಣವನ್ನು ಶೇ 100ಕ್ಕೆ ಹೆಚ್ಚಿಸಬೇಕು ಎಂದು ಹಲವು ಸಂಘಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಮತ್ತೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದೆ. ಆದರೆ ಇವಿಎಂ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳಿಗೆ ಚುನಾವಣಾ ಆಯೋಗಕ್ಕೂ ನಿರ್ದೇಶನ ನೀಡಿದೆ.

ಬೆಂಗಳೂರು: ವಿದ್ಯುನ್ಮಾನ ಮತಯಂತ್ರಗಳಲ್ಲಿನ (ಇವಿಎಂ) ಮತಗಳು ಮತ್ತು ಎಲ್ಲ ಶೇ 100ರಷ್ಟು ವಿವಿ–ಪ್ಯಾಟ್‌ ಯಂತ್ರಗಳಲ್ಲಿನ ಮತಗಳನ್ನು ಪರಸ್ಪರ ಹೋಲಿಸಿ ನೋಡಬೇಕು ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ತಿರಸ್ಕರಿಸಿದೆ. ಜತೆಗೆ ಇವಿಎಂ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡಬೇಕು ಎಂದು ಕೋರಿದ್ದ ಅರ್ಜಿಗಳನ್ನು ಮತ್ತು ಮತ್ತೆ ಮತಪತ್ರ (ಬ್ಯಾಲೆಟ್‌ ಪೇಪರ್‌) ವ್ಯವಸ್ಥೆಗೆ ಹಿಂತಿರುಗಬೇಕು ಎಂದು ಕೋರಿದ್ದ ಅರ್ಜಿಗಳನ್ನೂ ಪೀಠವು ತಿರಸ್ಕರಿಸಿದೆ. ಇವಿಎಂ ವ್ಯವಸ್ಥೆ ಸುರಕ್ಷಿತ ಮತ್ತು ವಿಶ್ವಾಸಾರ್ಹ ಎಂದು ಹೇಳಿದೆ.

ಈ ಸಂಬಂಧ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠವು ನಡೆಸಿತ್ತು. ಇವಿಎಂ ಬಗ್ಗೆ ಅರ್ಜಿದಾರರು ಎತ್ತಿದ್ದ ಪ್ರಶ್ನೆಗಳು ಮತ್ತು ಸಂದೇಹಗಳ ಬಗ್ಗೆ ಚುನಾವಣಾ ಆಯೋಗದಿಂದ ವಿವರಣೆ ಪಡೆದುಕೊಂಡಿತ್ತು. ಏಪ್ರಿಲ್‌ 18ರಂದು ನಡೆದಿದ್ದ ವಿಚಾರಣೆಯ ನಂತರ ತೀರ್ಪನ್ನು ಕಾಯ್ದಿರಿಸಿತ್ತು. ಆದರೆ ಇನ್ನಷ್ಟು ತಾಂತ್ರಿಕ ವಿವರಗಳ ಅಗತ್ಯವಿದ್ದ ಕಾರಣ ಏಪ್ರಿಲ್‌ 24ರಂದು ಮತ್ತೆ ವಿಚಾರಣೆ ನಡೆಸಿ, ಚುನಾವಣಾ ಆಯೋಗದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತ್ತು.

ಇಬ್ಬರು ನ್ಯಾಯಮೂರ್ತಿಗಳೂ ಪ್ರತ್ಯೇಕವಾದ ತೀರ್ಪನ್ನು ನೀಡಿದ್ದರೂ, ಮೇಲಿನ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ. ‘ಚುನಾವಣಾ ಆಯೋಗದಲ್ಲಿ, ಚುನಾವಣಾ ವ್ಯವಸ್ಥೆಯಲ್ಲಿ ನಂಬಿಕೆ ಇರಬೇಕು’ ಎಂದು ಹೇಳಿದ್ದಾರೆ. ‘ಅರ್ಜಿದಾರರ ಕೋರಿಕೆಗಳು ಕೇವಲ ಅನುಮಾನ, ಸಂದೇಹವನ್ನು ಆಧರಿಸಿದ್ದವು. ಮತ್ತು ಅರ್ಜಿದಾರರು ಯಾವುದೇ ಸಾಕ್ಷ್ಯಗಳನ್ನು ಒದಗಿಸಿರಲಿಲ್ಲ. ಕೇವಲ ಸಂದೇಹವನ್ನು ಆಧಾರವಾಗಿ ಇರಿಸಿಕೊಂಡು, ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ. ಈ ತೀರ್ಪನ್ನು ತಾಂತ್ರಿಕ ವರದಿ ಮತ್ತು ಸಾಕ್ಷ್ಯಗಳ ಆಧಾರದಲ್ಲಿ ನೀಡಲಾಗಿದೆ’ ಎಂದು ಪೀಠವು ತನ್ನ ತೀರ್ಪಿನಲ್ಲಿ ವಿವರಿಸಿದೆ. ‘ಇವಿಎಂ ವ್ಯವಸ್ಥೆಯ ಸಂಬಂಧ ಮುಂದೆ ಅರ್ಜಿಗಳು ಸಲ್ಲಿಕೆಯಾದರೆ, ಅವುಗಳು ಸಾಕ್ಷ್ಯಗಳನ್ನು ಆಧರಿಸಿವೆಯೇ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಬೇಕಾಗುತ್ತದೆ’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ADVERTISEMENT

‘40 ಬಾರಿ ಅರ್ಜಿ ತಿರಸ್ಕೃತ’: ಇವಿಎಂ ಸಂಬಂಧ ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳು ತಿರಸ್ಕೃತವಾದ 40 ನಿದರ್ಶನಗಳು ನಮ್ಮೆದುರು ಇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಹೇಳಿದ್ದರು. ಮಾರ್ಚ್‌ 16ರಂದು ಅವರು ಈ ಮಾಹಿತಿ ಹಂಚಿಕೊಂಡಿದ್ದರು.

ಇವಿಎಂ ವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಲ್ಲಾ ಅರ್ಜಿಗಳ ಮನವಿಯೂ ಬೇರೆ–ಬೇರೆಯೇ ಆಗಿತ್ತು. ಜತೆಗೆ ವಿಚಾರಣೆ ಮಧ್ಯೆಯೇ ಇನ್ನಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಪ್ರಮುಖ ಮನವಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ತೀರ್ಪು ಇಲ್ಲಿವೆ...

ಮತಪತ್ರ 

ಮನವಿ: ಇವಿಎಂ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಿಬೇಕು ಮತ್ತು ಮತಪತ್ರ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಬೇಕು

ತೀರ್ಪು: ಇವಿಎಂ ವ್ಯವಸ್ಥೆ ಸುರಕ್ಷಿತವಾಗಿದೆ ಮತ್ತು ಸಂಪೂರ್ಣ ವಿಶ್ವಾಸಾರ್ಹವಾಗಿದೆ ಎಂಬುದನ್ನು ಚುನಾವಣಾ ಆಯೋಗವು ಸಾಬೀತು ಮಾಡಿದೆ. ಆದರೆ ಮತಚೀಟಿ ವ್ಯವಸ್ಥೆಯಿದ್ದಾಗ ಮತದಾನವನ್ನು ಹೇಗೆ ಹಾದಿತಪ್ಪಿಸಲಾಗುತ್ತಿತ್ತು ಮತ್ತು ಮತಗಟ್ಟೆಗಳನ್ನೇ ವಶಕ್ಕೆ ಪಡೆದು, ತಮಗೆ ಬೇಕಾದಂತೆ ಮತ ಹಾಕಿಕೊಳ್ಳಲಾಗುತ್ತಿತ್ತು ಎಂಬುದನ್ನು ನಾವು ನೋಡಿದ್ದೇವೆ. ಆ ಅವ್ಯವಸ್ಥೆಯನ್ನು ಇವಿಎಂ ವ್ಯವಸ್ಥೆಯು ನಿವಾರಿಸಿದೆ.

ಇವಿಎಂ ಎಷ್ಟು ಕರಾರುವಕ್ಕಾಗಿ ಕೆಲಸ ಮಾಡುತ್ತದೆ ಎಂಬುದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಮತದಾರರಿಗೂ ಗೊತ್ತಿದೆ. ಚುನಾವಣಾ ಪ್ರಕ್ರಿಯೆಯನ್ನು ಇವಿಎಂ ಸರಳಗೊಳಿಸಿದೆ. ಅದರಲ್ಲಿ ಕೆಲವು ಕೊರತೆಗಳು ಇದೆ ಎಂಬುದು ಸಾಬೀತಾದರೆ, ಅದನ್ನು ನಿವಾರಿಸಲು ಅವಕಾಶವಿದೆ ಮತ್ತು ಸುಧಾರಣೆಗೂ ಅವಕಾಶವಿದೆ. ಸುಧಾರಣೆಯತ್ತ ಗಮನಹರಿಸಬೇಕೇ ಹೊರತು, ಈ ಹಿಂದೆ ಜಾರಿಯಲ್ಲಿದ್ದ ವ್ಯವಸ್ಥೆಗೆ ವಾಪಸಾಗಬೇಕು ಎಂಬುದು ಸರಿಯಲ್ಲ. ಹೀಗಾಗಿ ಈ ಅರ್ಜಿಯನ್ನು ತಿರಸ್ಕರಿಸಲೇಬೇಕು.

ಇವಿಎಂಯಲ್ಲಿ ದಾಖಲಾದ ಮತಗಳ ಬಗ್ಗೆ ಅನುಮಾನವಿದ್ದರೆ ಅದನ್ನು ಪರಿಹರಿಸಿಕೊಳ್ಳಲು ಈಗಾಗಲೇ ಪರಿಹಾರ ಮಾರ್ಗವಿದೆ. ಶೇ5ರಷ್ಟು ವಿವಿ–ಪ್ಯಾಟ್‌ ಯಂತ್ರಗಳಲ್ಲಿನ ಮತಚೀಟಿಗಳನ್ನು ಇವಿಎಂ ಮತಗಳ ಜತೆಗೆ ಹೋಲಿಸಿ ನೋಡಲು ಅವಕಾಶವಿದೆ. ಅಭ್ಯರ್ಥಿಗಳು ಮನವಿ ಸಲ್ಲಿಸುವ ಮೂಲಕ ಹೆಚ್ಚುವರಿ ವಿವಿ–ಪ್ಯಾಟ್‌ ಯಂತ್ರಗಳಲ್ಲಿನ ಮತಚೀಟಿಗಳನ್ನು ಹೋಲಿಸಿ ನೋಡಬಹುದು. ಇದಕ್ಕಾಗಿ ಈಗಾಗಲೇ ಕಾನೂನಿನಲ್ಲಿ ಅವಕಾಶವಿದೆ.

ವಿವಿ–ಪ್ಯಾಟ್‌ ಎಣಿಕೆ

ಮನವಿ: ಇವಿಎಂಗಳನ್ನು ತಿರುಚಬಹುದಾಗಿದೆ. ಹೀಗಾಗಿ, ಇವಿಎಂಗಳು ಮತ್ತು ಶೇ 100ರಷ್ಟು ವಿವಿ–ಪ್ಯಾಟ್‌ಗಳಲ್ಲಿನ ಮತಗಳನ್ನು ಹೋಲಿಸಿ ನೋಡಬೇಕು

ತೀರ್ಪು: ಇವಿಎಂ ವ್ಯವಸ್ಥೆಯಲ್ಲಿ ಇರುವ ಕಂಟ್ರೋಲ್‌ ಯುನಿಟ್‌, ಬ್ಯಾಲೆಟ್‌ ಯುನಿಟ್‌ ಮತ್ತು ವಿವಿ–ಪ್ಯಾಟ್‌ಗಳಲ್ಲಿ ಮೈಕ್ರೊ ಕಂಟ್ರೋಲರ್‌ಗಳು ಮಾತ್ರ ಇದ್ದು, ಅವುಗಳನ್ನು ಒಮ್ಮೆ ಮಾತ್ರ ಪ್ರೋಗ್ರಾಮಿಂಗ್‌ ಮಾಡಬಹುದು. ಅವುಗಳನ್ನು ತಿರುಚಲು ಯತ್ನಿಸಿದರೆ ಅವು ಸಂಪೂರ್ಣವಾಗಿ ಸ್ಥಗಿತವಾಗುತ್ತವೆ. ಹೀಗಾಗಿ ಅವುಗಳನ್ನು ತಿರುಚಲು ಸಾಧ್ಯವಾಗುವುದಿಲ್ಲ ಎಂಬುದನ್ನು ಚುನಾವಣಾ ಆಯೋಗವು ಸಾಬೀತು ಮಾಡಿದೆ. ಹೀಗಾಗಿ ಇವಿಎಂ ವ್ಯವಸ್ಥೆ ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿದೆ. 

ವಿವಿ–ಪ್ಯಾಟ್‌ಗಳು ಮುದ್ರಿಸುವ ಮತಚೀಟಿಗಳು ಐದು ವರ್ಷಗಳವರೆಗೆ ಉಳಿಯುವಂತೆ ಮಾಡಲು ವಿಶೇಷ ರಾಸಾಯನಿಕವನ್ನು ಯಂತ್ರವೇ ಲೇಪಿಸುತ್ತದೆ. ಹೀಗಾಗಿ ಮತಚೀಟಿಗಳು ಅಂಟುವ ಸ್ವರೂಪದಲ್ಲಿ ಇರುತ್ತದೆ. ಒಂದು ವಿವಿ–ಪ್ಯಾಟ್‌ ಯಂತ್ರದಲ್ಲಿನ ಎಲ್ಲಾ ಮತಚೀಟಿಗಳನ್ನು ಎಣಿಸಲು, ಅವುಗಳನ್ನು ಅಭ್ಯರ್ಥಿಗಳಿಗನುಗುಣವಾಗಿ ಪ್ರತ್ಯೇಕಿಸಲು ಮತ್ತು ಮತಯಂತ್ರಗಳಲ್ಲಿನ ಮತಗಳೊಂದಿಗೆ ಹೋಲಿಸಿ ನೋಡಲು ಐದು ಗಂಟೆ ಬೇಕಾಗುತ್ತದೆ. ಶೇ 100ರಷ್ಟು ವಿವಿ–ಪ್ಯಾಟ್‌ ಯಂತ್ರಗಳಲ್ಲಿನ ಮತಗಳನ್ನು ಹೋಲಿಸಿ ನೋಡಲು ಹೆಚ್ಚಿನ ಸಮಯ ಬೇಕಾಗುತ್ತದೆ ಮತ್ತು ಸಿಬ್ಬಂದಿಯ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಬೇಕಾಗುತ್ತದೆ. ಹೀಗಾಗಿ ಶೇ 100ರಷ್ಟೂ ವಿವಿ–ಪ್ಯಾಟ್‌ ಯಂತ್ರಗಳಲ್ಲಿನ ಮತಚೀಟಿಗಳನ್ನು, ಇವಿಎಂಗಳಲ್ಲಿನ ಮತಗಳೊಂದಿಗೆ ಹೋಲಿಸಿ ನೋಡಿ ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ.

ಮತಚೀಟಿಯಲ್ಲಿ ಬಾರ್‌ಕೋಡ್‌

ಮನವಿ: ವಿವಿ–ಪ್ಯಾಟ್‌ ಯಂತ್ರಗಳಲ್ಲಿನ ಮತಚೀಟಿಗಳನ್ನು ಭೌತಿಕವಾಗಿ ಎಣಿಕೆ ಮಾಡಲು ಹೆಚ್ಚಿನ ಸಮಯಬೇಕಾಗುತ್ತದೆ. ಬದಲಿಗೆ ಅವುಗಳ ಮೇಲೆ ಬಾರ್‌ಕೋಡ್‌ ಮುದ್ರಿಸಿದರೆ, ಯಂತ್ರಗಳ ಮೂಲಕ ಸುಲಭವಾಗಿ ಮತ್ತು ತ್ವರಿತವಾಗಿ ಎಣಿಕೆ ಮಾಡಬಹುದು. ಈ ಬಗ್ಗೆ ನಿರ್ದೇಶನ ನೀಡಬೇಕು

ತೀರ್ಪು: ಶೇ 100ರಷ್ಟೂ ವಿವಿ–ಪ್ಯಾಟ್‌ ಯಂತ್ರಗಳಲ್ಲಿನ ಮತಚೀಟಿಗಳ ಎಣಿಕೆಯನ್ನು ಬಾರ್‌ಕೋಡ್‌ ವ್ಯವಸ್ಥೆಯು ಸಾಧ್ಯವಾಗಿಸಬಹುದು. ಈ ಮನವಿ ಮತ್ತು ಸಲಹೆ ಸಮಜಂಸವಿದ್ದಂತೆ ಕಾಣುತ್ತದೆ. ಆದರೆ ಇದು ಸಂಪೂರ್ಣವಾಗಿ ತಾಂತ್ರಿಕ ವಿಷಯವಾದ ಕಾರಣ ಚುನಾವಣಾ ಆಯೋಗವೇ ಈ ಬಗ್ಗೆ ಗಮನಹರಿಸಬೇಕು. ಇದರ ಕಾರ್ಯಸಾಧ್ಯತೆಯನ್ನು ಆಯೋಗವು ಪರಿಶೀಲಿಸಬಹುದು. ಆದರೆ ಈ ಬಗ್ಗೆ ನ್ಯಾಯಾಲಯವು ಈಗ ಹೆಚ್ಚಿನದ್ದೇನೂ ಹೇಳಲು ಸಾಧ್ಯವಿಲ್ಲ.

ಆಯೋಗಕ್ಕೆ ನಿರ್ದೇಶನ

ಸುಪ್ರೀಂ ಕೋರ್ಟ್‌ ಪೀಠವು ಅರ್ಜಿಗಳನ್ನು ತಿರಸ್ಕರಿಸಿದರೂ, ಇವಿಎಂ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ

ನಿರ್ದೇಶನ 1:

* ವಿವಿ–ಪ್ಯಾಟ್‌ ಯಂತ್ರಗಳಿಗೆ ಅಭ್ಯರ್ಥಿಗಳ ಕ್ರಮಸಂಖ್ಯೆ, ಚಿತ್ರ, ಚಿಹ್ನೆಯನ್ನು ಒಳಗೊಂಡ ‘ಇಮೇಜ್‌’ ಅನ್ನು ಲೋಡ್‌ ಮಾಡುವ ‘ಸಿಂಬಲ್‌ ಲೋಡಿಂಗ್‌ ಯುನಿಟ್‌–ಎಸ್‌ಎಲ್‌ಯು’ ಅನ್ನು ಈಗ ಸೀಲ್‌ ಮಾಡಿ ಸುರಕ್ಷಿತವಾಗಿ ಇರಿಸುವ ವ್ಯವಸ್ಥೆ ಇಲ್ಲ

* ಆದರೆ ಇನ್ನು ಮುಂದೆ ವಿವಿ–ಪ್ಯಾಟ್‌ ಯಂತ್ರಗಳಿಗೆ ಇಮೇಜ್‌ಗಳನ್ನು ಅಪ್‌ಲೋಡ್‌ ಮಾಡಿದ ನಂತರ, ಸಿಂಬಲ್ ಲೋಡಿಂಗ್‌ ಯುನಿಟ್‌ಗಳನ್ನು ಸೀಲ್‌ ಮಾಡಬೇಕು ಮತ್ತು ಸೀಲ್‌ ಮೇಲೆ ಅಭ್ಯರ್ಥಿಗಳು ಅಥವಾ ಅವರ ಪ್ರತಿನಿಧಿಗಳು ಸಹಿ ಮಾಡಬೇಕು. ಹೀಗೆ ಸೀಲ್‌ ಮಾಡಿದ ಸಿಂಬಲ್‌ ಲೋಡಿಂಗ್‌ ಯುನಿಟ್‌ಗಳನ್ನು ಸಂಬಂಧಿತ ಕ್ಷೇತ್ರದ ಇವಿಎಂಗಳ ಜತೆಗೆ ಸ್ಟ್ರಾಂಗ್‌ರೂಂನಲ್ಲಿ ಇರಿಸಬೇಕು

* ಫಲಿತಾಂಶ ಪ್ರಕಟವಾದ ನಂತರ 45 ದಿನಗಳವರೆಗೂ ಎಸ್‌ಎಲ್‌ಯು
ಗಳನ್ನು ಹಾಗೇ ಇರಿಸಬೇಕು. ತಕರಾರುಗಳು ಬಂದಲ್ಲಿ, ಅದನ್ನು ಪರಿಹರಿಸಲು ಇವಿಎಂಗಳ ಜತೆಗೆ ಎಸ್‌ಎಲ್‌ಯುಗಳನ್ನೂ ಬಳಸಿಕೊಳ್ಳಬೇಕು

* ಮೇ 1ರ ನಂತರ ಮತದಾನ ನಡೆಯುವ ಎಲ್ಲಾ ಕ್ಷೇತ್ರಗಳಿಗೂ ಇದು ಅನ್ವಯವಾಗುತ್ತದೆ. ಈಗಾಗಲೇ ಮತದಾನ ನಡೆದಿರುವ ಕ್ಷೇತ್ರಗಳಿಗೆ ಇದು ಅನ್ವಯವಾಗುವುದಿಲ್ಲ

ನಿರ್ದೇಶನ 2:

* ಇವಿಎಂ ಅಂದರೆ ಕಂಟ್ರೋಲ್‌ ಯುನಿಟ್‌, ಬ್ಯಾಲೆಟ್‌ ಯುನಿಟ್‌ ಮತ್ತು ವಿವಿ–ಪ್ಯಾಟ್‌ಗಳಲ್ಲಿ ಮೈಕ್ರೊಕಂಟ್ರೋಲರ್‌ಗಳು ಇರುತ್ತವೆ ಮತ್ತು ಅವುಗಳಲ್ಲಿ ಮೆಮೊರಿಯನ್ನು ಬರ್ನ್‌ (ಪ್ರೋಗ್ರಾಮಿಂಗ್‌) ಮಾಡಲಾಗಿರುತ್ತದೆ. ಫಲಿತಾಂಶದ ಬಗ್ಗೆ ಅಭ್ಯರ್ಥಿಗಳಿಗೆ ತಕರಾರು ಇದ್ದರೆ, ಅವರು ಫಲಿತಾಂಶ ಬಂದ ಏಳು ದಿನಗಳ ಒಳಗೆ ಈ ಸಂಬಂಧ ಲಿಖಿತ ಮನವಿ ಸಲ್ಲಿಸಬೇಕು

* ಮನವಿ ಬಂದ ನಂತರ ಶೇ 5ರಷ್ಟು ಇವಿಎಂಗಳಲ್ಲಿನ ಬರ್ನ್ಟ್‌ ಮೆಮೊರಿಯನ್ನು ಇವಿಎಂ ತಯಾರಕ ಕಂಪನಿಯ ಎಂಜಿನಿಯರ್‌ಗಳು ಅಭ್ಯರ್ಥಿಗಳ ಎದುರು ಪರಿಶೀಲಿಸಬೇಕು. ಇದರ ಸಂಪೂರ್ಣ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸಬೇಕು. ಇವಿಎಂಗಳಲ್ಲಿ ಮತಗಳನ್ನು ತಿರುಚಿರುವುದು ಪತ್ತೆಯಾದರೆ, ಆ ವೆಚ್ಚವನ್ನು ಆಯೋಗವು ಅಭ್ಯರ್ಥಿಗಳಿಗೆ ಹಿಂತಿರುಗಿಸಬೇಕು

* ಫಲಿತಾಂಶ ಪಟ್ಟಿಯಲ್ಲಿ ಅತಿಹೆಚ್ಚು ಮತ ಪಡೆದ ಎರಡನೇ ಮತ್ತು ಅತಿಹೆಚ್ಚು ಮತ ಪಡೆದ ಮೂರನೇ ಅಭ್ಯರ್ಥಿಗಳು ಮಾತ್ರ ಇಂತಹ ಮನವಿ ಸಲ್ಲಿಸಬಹುದು

ದೇಶವು ಹಲವು ವರ್ಷಗಳ ಶ್ರಮ ಮತ್ತು ಬದ್ಧತೆಯ ಮೂಲಕ ಸಾಧಿಸಿರುವ ಗುರಿಗಳನ್ನು ತಲೆಕೆಳಗು ಮಾಡಲು ಕೆಲವು ದುಷ್ಟಗುಂಪುಗಳು ಯತ್ನಿಸುತ್ತಿವೆ. ಈಚಿನ ವರ್ಷಗಳಲ್ಲಿ ಇಂತಹ ಯತ್ನಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದೇವೆ. ಇವು ದೇಶವನ್ನು ಎಲ್ಲಾ ಹಂತದಲ್ಲೂ ದುರ್ಬಲಗೊಳಿಸುವ, ದೇಶಕ್ಕೆ ಮಸಿಬಳಿಯುವ ಯತ್ನಗಳಾಗಿವೆ. ಅಂತಹ ಎಲ್ಲಾ ಯತ್ನಗಳನ್ನು ಆರಂಭದಲ್ಲೇ ತಡೆಯಬೇಕು. ಸಾಂವಿಧಾನಿಕ ನ್ಯಾಯಾಲಯಗಳು ಇರುವವರೆಗೂ ಇಂತಹ ಯತ್ನಗಳು ಸಫಲವಾಗಲು ಸಾಧ್ಯವಿಲ್ಲ. ಮತ್ತೆ ಹಳೆಯ ಪದ್ಧತಿಗೆ ವಾಪಸಾಗಬೇಕು ಎಂಬ ಮನವಿಗಳು ಬಂದಾಗಲೆಲ್ಲಾ ಅವುಗಳ ಉದ್ದೇಶದ ಬಗ್ಗೆ ನನಗೆ ಸಂದೇಹ ಮೂಡುತ್ತದೆ. ಇವಿಎಂ ವ್ಯವಸ್ಥೆ ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ತಂದಿದೆ. ಹೀಗಿರುವಾಗ ‘ಮತಪತ್ರ’ ವ್ಯವಸ್ಥೆಗೆ ವಾಪಸಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
–ನ್ಯಾಯಮೂರ್ತಿ ದೀಪಂಕರ್ ದತ್ತಾ

ಮೋದಿ ಟೀಕೆಗೆ ಪ್ರತಿಟೀಕೆ

ನವದೆಹಲಿ: ಇವಿಎಂಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ನೀಡಿರುವ ತೀರ್ಪು ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಈ ತೀರ್ಪನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ಮೇಲೆ ಹರಿಹಾಯ್ದಿದ್ದಾರೆ. ವಿರೋಧ ಪಕ್ಷಗಳೂ ಪ್ರಧಾನಿ ಮಾತಿಗೆ ತಿರುಗೇಟು ನೀಡಿವೆ.

ಕಾಂಗ್ರೆಸ್, ಆರ್‌ಜೆಡಿ ಮತ್ತು ‘ಇಂಡಿ’ ಒಕ್ಕೂಟದ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ ಅವರು ಮತಗಟ್ಟೆಗಳನ್ನೇ ಅಪಹರಿಸುವ ಮೂಲಕ ಬಡವರು, ಹಿಂದುಳಿದವರು ಮತ್ತು ದಲಿತರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತಿದ್ದರು. ಇವಿಎಂಗಳ ಬಂದ ನಂತರ ಈ ಪಕ್ಷಗಳು ಇಂತಹ ಆಟಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಅವರು ಇವಿಎಂ ಮೇಲೆ ಅಪನಂಬಿಕೆ ಸೃಷ್ಟಿಸಲು ಯತ್ನಿಸಿದರು. ಆದರೆ ದೇಶದ ಸರ್ವೋಚ್ಛ ನ್ಯಾಯಾಲಯವು ಇವಿಎಂ ಪರವಾಗಿ ತೀರ್ಪು ನೀಡುವ ಮೂಲಕ ಈ ಪಕ್ಷಗಳ ಕಪಾಳಕ್ಕೆ ಸರಿಯಾಗಿ ಬಾರಿಸಿದೆ.
–ನರೇಂದ್ರ ಮೋದಿ, ಪ್ರಧಾನಿ
ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ ಅವುಗಳಲ್ಲಿ ಯಾವ ಅರ್ಜಿಗಳಿಗೂ ನಮಗೂ ಪ್ರತ್ಯಕ್ಷವಾಗಲೀ, ಪರೋಕ್ಷವಾಗಲೀ ಸಂಬಂಧವಿಲ್ಲ. ದ್ವಿಸದಸ್ಯ ಪೀಠವು ನೀಡಿರುವ ತೀರ್ಪನ್ನು ಪರಿಶೀಲಿಸಿದ್ದೇವೆ. ಚುನಾವಣಾ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸವನ್ನು ಹೆಚ್ಚಿಸುವ ಸಂಬಂಧ ವಿವಿ–ಪ್ಯಾಟ್‌ಗಳನ್ನು ಹೆಚ್ಚು ಬಳಸಬೇಕು ಎಂಬ ಅಭಿಯಾನ ಮುಂದುವರಿಸುತ್ತೇವೆ.
–ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಬಿಜೆಪಿಯ ತಾರಾ ನಾಯಕ ಎಲ್‌.ಕೆ.ಅಡ್ವಾಣಿ ಅವರು 2009ರಲ್ಲಿ ಇವಿಎಂ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಿದ್ದರು. ಇವಿಎಂ ವಿರುದ್ಧ ಜಿ.ವಿ.ಎಲ್‌.ನರಸಿಂಹ ಅವರು ಬರೆದಿದ್ದ ಪುಸ್ತಕವನ್ನು ಅಡ್ವಾಣಿ ಬಿಡುಗಡೆ ಮಾಡಿದ್ದರು. ಹಾಗಿದ್ದರೆ, ಆಗ ಅಡ್ವಾಣಿ ಅವರು ದೇಶದ ಹಾದಿ ತಪ್ಪಿಸಿದ್ದರೇ? ಪ್ರಧಾನಿ ನರೇಂದ್ರ ಮೋದಿ ಅವರು ಆರೋಪ ಮಾಡುವ ಮುನ್ನ ಸ್ವಲ್ಪ ಸಂಶೋಧನೆ ಮಾಡಬೇಕು. ನೆಹರೂ ಅವರ ಮೇಲಷ್ಟೇ ಗಮನ ಹರಿಸುವ ಬದಲು, ಅಡ್ವಾಣಿ ಅವರ ಮೇಲೂ ಮೋದಿ ಅವರು ಗಮನ ಹರಿಸಬೇಕು.
–ಪವನ್‌ ಖೇರಾ, ಕಾಂಗ್ರೆಸ್‌ ವಕ್ತಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.