ಪಟ್ನಾ: ಬಿಹಾರದ ಸಸಾರಾಂ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ವೇಳೆ ನಡೆದಿದ್ದ ಕೋಮು ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿಯ ಮಾಜಿ ಶಾಸಕ ಜವಾಹರ ಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಪಸಂಖ್ಯಾತರನ್ನು ಸಮಾಧಾನಪಡಿಸಲು ಜವಾಹರ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ರೋಹತಾಸ್‌ನ ನ್ಯಾಯಾಲಯವು ಜವಾಹರ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿತ್ತು.
‘ಹಿಂಸಾಚಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜಕೀಯ ಹಿನ್ನೆಲೆ ಪರಿಗಣಿಸದೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತನಿಖಾ ತಂಡವು ಅದರ ಕೆಲಸ ಮಾಡುತ್ತಿದೆ. ತನಿಖೆಯಲ್ಲಿ ನಾನೆಂದಿಗೂ ಮಧ್ಯಪ್ರವೇಶಿಸುವುದಿಲ್ಲ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
‘ಗಲಭೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯು ಒಬಿಸಿಗೆ ಸೇರಿದ್ದು, ಇದೀಗ ಒಬಿಸಿ ನಾಯಕ ಜವಾಹರ ಅವರನ್ನೇ ಬಲಿಪಶು ಮಾಡಲಾಗಿದೆ’ ಎಂದು ಬಿಜೆಪಿ ವಕ್ತಾರ ನಿಖಿಲ್ ಆನಂದ್ ತಿಳಿಸಿದ್ದಾರೆ.
ಸಸಾರಾಮ್ ಮತ್ತು ಬಿಹಾರ್ ಷರೀಫ್‌ನಲ್ಲಿ ಮಾರ್ಚ್ 31 ಮತ್ತು ಏಪ್ರಿಲ್ 1ರಂದು ರಾಮನವಮಿ ಮೆರವಣಿಗೆಯ ವೇಳೆ ನಡೆದ ಹಿಂಸಾಚಾರದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.