ADVERTISEMENT

ಗಗನಸಖಿ ಆತ್ಮಹತ್ಯೆ ಪ್ರಕರಣ: ಮಾಜಿ ಸಚಿವ ಗೋಪಾಲ್ ನಿರ್ದೋಷಿ ಎಂದ ದೆಹಲಿ ನ್ಯಾಯಾಲಯ

ಪಿಟಿಐ
Published 25 ಜುಲೈ 2023, 6:29 IST
Last Updated 25 ಜುಲೈ 2023, 6:29 IST
ಗೋಪಾಲ್ ಗೋಯಲ್ ಕಂಡಾ
ಗೋಪಾಲ್ ಗೋಯಲ್ ಕಂಡಾ   ಪಿಟಿಐ ಚಿತ್ರ

ನವದೆಹಲಿ: 2012ರಲ್ಲಿ ನಡೆದಿದ್ದ ಗಗನ ಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಂಡಾ ನಿರ್ದೋಷಿ ಎಂದು ದೆಹಲಿ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಗೀತಿಕಾ ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪ ಗೋಪಾಲ್ ಕಂಡಾ ಮೇಲಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ವಿಕಾಸ್ ಧುಲ್‌ ಅವರು ಗೋಪಾಲ್ ಕಂಡಾ ಹಾಗೂ ಮತ್ತೊಬ್ಬ ಆರೋಪಿ ಅರುಣಾ ಛಡ್ಡಾ ಅವರನ್ನು ನಿರ್ದೋಷಿ ಎಂದು ಆದೇಶಿಸಿದ್ದಾರೆ. ಪ್ರಕರಣದಲ್ಲಿ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಕಂಡಾ ಹಾಗೂ ಛಡ್ಡಾ ವಿರುದ್ಧ ಆತ್ಮಹತ್ಯೆಗೆ ಕುಮ್ಮಕ್ಕು, ಬೆದರಿಕೆ, ಸಾಕ್ಷಿ ನಾಶ, ಪಿತೂರಿ ಹಾಗೂ ಇನ್ನಿತರ ಆರೋಪಗಳಿದ್ದವು. ಇದರೊಂದಿಗೆ ಅತ್ಯಾಚಾರ ಹಾಗೂ ಅಸ್ವಾಭಾವಿಕ ಲೈಂಗಿಕಕ್ರಿಯೆ ನಡೆಸಿದ ಆರೋಪವೂ ಸೇರಿಸಲಾಗಿತ್ತು. ಆದರೆ ನಂತರ ಈ ಎರಡನ್ನು ನ್ಯಾಯಾಲಯವು ವಿಚಾರಣೆಯಿಂದ ಕೈಬಿಟ್ಟಿತು. 

ADVERTISEMENT

ಗೀತಿಕಾ ಶರ್ಮಾ ಅವರು ಕಂಡಾ ಅವರು ನಡೆಸುತ್ತಿದ್ದ ಎಂಎಲ್‌ಡಿಆರ್‌ ಏರ್‌ಲೈನ್ಸ್‌ನಲ್ಲಿ ಉದ್ಯೋಗಿಯಾಗಿದ್ದರು. 2012ರ ಆ. 5ರಂದು  ದೆಹಲಿ ವಾಯವ್ಯ ಭಾಗದಲ್ಲಿರುವ ಅಶೋಕ ವಿಹಾರದಲ್ಲಿರುವ ಮನೆಯಲ್ಲಿ ಗೀತಿಕಾ ಅವರ ಮೃತದೇಹ ಪತ್ತೆಯಾಗಿತ್ತು. ಆ. 4ರಂದು ಗೀತಿಕಾ ಅವರು ಬರೆದಿಟ್ಟಿದ್ದರು ಎನ್ನಲಾದ ಮರಣ ಪತ್ರದಲ್ಲಿ ಕಂಡಾ ಹಾಗೂ ಛಡ್ಡಾ ಅವರ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಬರೆಯಲಾಗಿತ್ತು.

ಗೃಹ ಇಲಾಖೆ ರಾಜ್ಯ ಸಚಿವರಾಗಿದ್ದ ಕಂಡಾ ಅವರು ಈ ಪ್ರಕರಣದ ನಂತರ ರಾಜೀನಾಮೆ ನೀಡಿದ್ದರು. 2009ರ ವಿಧಾನಸಭಾ ಚುನಾವಣೆಯಲ್ಲಿ ಸಿರ್ಸಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಂಡಾ ಸ್ಪರ್ಧಿಸಿ ಗೆದ್ದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.