ಅಹಮದಾಬಾದ್: ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರು 1996ರಲ್ಲಿ ಬನಾಸಕಾಂಠಾ ಜಿಲ್ಲೆಯ ಎಸ್‌ಪಿ ಆಗಿದ್ದಾಗ ಮಾದಕವಸ್ತುಗಳ ಪ್ರಕರಣವೊಂದರಲ್ಲಿ ವಕೀಲರೊಬ್ಬರನ್ನು ಸಿಲುಕಿಸುವ ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ಪಾಲನಪುರದ ವಿಶೇಷ ನ್ಯಾಯಾಲಯ ಬುಧವಾರ ಹೇಳಿದೆ.
ಭಟ್ ಅವರು ಅಪರಾಧಿ ಎಂದು ಘೋಷಿಸಿರುವ ನ್ಯಾಯಾಲಯವು, ಅವರ ಶಿಕ್ಷೆಯ ಪ್ರಮಾಣವನ್ನು ಘೋಷಿಸಿಲ್ಲ. ಶಿಕ್ಷೆ ಏನು ಎಂಬುದನ್ನು ನ್ಯಾಯಾಲಯವು ಶುಕ್ರವಾರ ಪ್ರಕಟಿಸುವ ನಿರೀಕ್ಷೆ ಇದೆ. ಭಟ್ ಅವರಿಗೆ 20 ವರ್ಷಗಳ ಶಿಕ್ಷೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಕೋರಿದೆ.
ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ಕಾಯ್ದೆಯ (ಎನ್‌ಡಿಪಿಎಸ್ ಕಾಯ್ದೆ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಭಟ್ ಅವರನ್ನು ಅಪರಾಧಿ ಎಂದು ಘೋಷಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ಪರ ವಕೀಲರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಕೆಲವು ಸೆಕ್ಷನ್‌ಗಳ ಅಡಿಯಲ್ಲಿಯೂ ಭಟ್ ಅವರು ಅಪರಾಧಿ ಎಂದು ಕೋರ್ಟ್ ಹೇಳಿದೆ.
ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಒಂದು ಆಸ್ತಿಯನ್ನು ತೆರವು ಮಾಡಿಸುವ ಉದ್ದೇಶದಿಂದ ವಕೀಲ ಎಸ್.ಎಸ್. ರಾಜಪುರೋಹಿತ್ ಎಂಬುವವರನ್ನು ಮಾದಕ ವಸ್ತುಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಲುಕಿಸಲು ಭಟ್ ಅವರು ಯತ್ನಿಸಿದ್ದರು ಎಂದು ಆರೋಪ ಹೊರಿಸಲಾಗಿತ್ತು. ಆಗ ಭಟ್ ಅವರನ್ನು ರಾಜಸ್ಥಾನದ ಬನಾಸಕಾಂಠಾ ಜಿಲ್ಲೆಯ ಎಸ್‌ಪಿ ಆಗಿ ನಿಯೋಜಿಸಲಾಗಿತ್ತು. ಈ ಜಿಲ್ಲೆಯು ಪಾಲೀ ಜಿಲ್ಲೆಯ ಜೊತೆ ಗಡಿ ಹಂಚಿಕೊಂಡಿದೆ. ಆಗ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿ ಆಗಿದ್ದ ಆರ್.ಆರ್. ಜೈನ್ ಅವರ ಸಂಬಂಧಿ ಒಬ್ಬರಿಗೆ ಸೇರಿದ ಆಸ್ತಿ ಅದು. ಪ್ರಕರಣದ ಪ್ರಮುಖ ಸೂತ್ರಧಾರರಲ್ಲಿ ಒಬ್ಬರಾದ ಭಟ್ ಅವರು ಅಫೀಮು ಖರೀದಿಸಲು ₹20 ಸಾವಿರ ವ್ಯಯಿಸಿದ್ದರು, ಪಾಲನಪುರದ ಹೋಟೆಲ್ ಒಂದರ ಕೊಠಡಿಯಲ್ಲಿ ಅದನ್ನು ಇರಿಸಿದ್ದರು ಎಂದು ಗುಜರಾತ್ ಸಿಐಡಿ ಅಧಿಕಾರಿಗಳು ಹೇಳಿದ್ದರು.
ಭಟ್ ಅವರನ್ನು 2018ರ ಸೆಪ್ಟೆಂಬರ್‌ನಲ್ಲಿ ಬಂಧಿಸಲಾಯಿತು. ಅಂದಿನಿಂದ ಅವರು ಜೈಲಿನಲ್ಲಿ ಇದ್ದಾರೆ. ಪೊಲೀಸ್ ವಶದಲ್ಲಿ ಇದ್ದಾಗಲೇ ವ್ಯಕ್ತಿಯೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ ಅವರಿಗೆ ಜೀವಾವಧಿ ಶಿಕ್ಷೆಯನ್ನು ಈಗಾಗಲೇ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.