ADVERTISEMENT

ಹಣ ಅಕ್ರಮ ವರ್ಗಾವಣೆ: ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಹೇಮಂತ್ ಸೊರೇನ್

ಪಿಟಿಐ
Published 28 ಮೇ 2024, 4:39 IST
Last Updated 28 ಮೇ 2024, 4:39 IST
   

ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಜಾಮೀನು ಕೋರಿ ಸೋಮವಾರ ಜಾರ್ಖಂಡ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ನ್ಯಾಯಮೂರ್ತಿ ರೊಂಗೋನ್ ಮುಖೋಪಾಧ್ಯಾಯ ಅವರ ಪೀಠದ ಮುಂದೆ ಮಂಗಳವಾರ(ಇಂದು) ವಿಚಾರಣೆಗೆ ನಿಗದಿ ಮಾಡಲಾಗಿದೆ.

ಬಾರ್‌ಗೇನ್ ಸರ್ಕಲ್‌ನಲ್ಲಿರುವ 8.5 ಎಕರೆ ಜಮೀನಿನ ಯಾವುದೇ ದಾಖಲೆಗಳಲ್ಲಿ ತನ್ನ ಹೆಸರಿಲ್ಲ. ಜಮೀನು ತನಗೆ ಸೇರಿದ್ದು ಎಂದು ಹೇಳಿರುವ ಕೆಲವರ ಹೇಳಿಕೆಗಳನ್ನು ಮಾತ್ರ ಇ.ಡಿ ಪರಿಗಣಿಸಿದೆ. ಆದರೆ ಅಂತಹ ಹೇಳಿಕೆಗಳನ್ನು ಪುಷ್ಟೀಕರಿಸಲು ಯಾವುದೇ ದಾಖಲೆಗಳಿಲ್ಲ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಸುಮಾರು ₹600 ಕೋಟಿ ಮೊತ್ತದ ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಹೇಮಂತ್‌ ಅವರನ್ನು ಜನವರಿ 31ರಂದು ಬಂಧಿಸಿತ್ತು. ಅದಕ್ಕೂ ಮುನ್ನ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಸದ್ಯ ಅವರು ರಾಂಚಿಯ ಹೊತ್ವಾರ್‌ನಲ್ಲಿರುವ ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.